ಜಿಲ್ಲೆ

ಬೀದರ್ ಜಿಲ್ಲಾದ್ಯಂತ ರೆಡ್ ಅಲಟ್೯

ರೇವಣಸಿದ್ದಪ್ಪ ಪಾಟೀಲ್

ಬೀದರ್: ಜಿಲ್ಲಾದ್ಯಂತ 100-130 ಮಿಮೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಗುರುವಾರ ರೆಡ್ ಅಲಟ್೯ ಘೋಷಿಸಲಾಗಿದೆ. ಸಾರ್ವಜನಿಕರು ಅನಗತ್ಯ ಮನೆಯಿಂದ ಹೊರಗೆ ಬರುವುದು, ಹಳ್ಳ-ಕೊಳ್ಳ, ಕೆರೆಗಳತ್ತ ಹೋಗುವುದನ್ನು ಮಾಡಬಾರದು ಎಂದು ಜಿಲ್ಲಾಧಿಕಾರಿ ಗೋವಿಂದರಡ್ಡಿ ಮನವಿ ಮಾಡಿದ್ದಾರೆ.
ಡಿಸಿ ಕಚೇರಿಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಸೇತುವೆ ಮೇಲೆ ನೀರು ಬಂದು ಹಿಂದೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಯಾವ್ಯಾವ ಸೇತುವೆಗಳಲ್ಲಿ ಹೆಚ್ಚಿನ ನೀರು ಬರುತ್ತದೆ ಎಂಬ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಆಯಾ ತಾಲೂಕಿನ ತಹಸೀಲ್ದಾರ್ ಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಗುರುವಾರ ರೆಡ್ ಅಲಟ್೯ ಇರುವ ಬಗ್ಗೆ ಎಲ್ಲ ಗ್ರಾಮಗಳಲ್ಲಿ ಡಂಗೂರ ಹೊಡೆಸಿ ಎಚ್ಚರಿಕೆಯಿಂದ ಇರುವಂತೆ ತಿಳಿಸಬೇಕು. ಕುಸಿಯುವ ಹಂತದ ಮನೆಗಳಲ್ಲಿ ಇರುವವರು ಅಕ್ಕಪಕ್ಕದ ಇಲ್ಲವೆ ಸಂಬಂಧಿಕರ ಮನೆಗೆ ಹೋಗುವಂತೆ ತಿಳಿಹೇಳಬೇಕು. ಹೆಚ್ಚಿನ ಮಳೆಯಾಗುತ್ತಿದ್ದು, ಕಾರಂಜಾ ಜಲಾಶಯದಿಂದ ನೀರು ಬಿಡಲಾಗುತ್ತಿದೆ. ಡ್ಯಾಂ ಕೆಳಗಿನ ಹಳ್ಳಿ ಜನ ಎಚ್ಚರಿಕೆ ವಹಿಸಬೇಕು ಎಂದರು.
ಬುಧವಾರ ಮತ್ತು ಗುರುವಾರ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ಯಾರೂ ರಜೆ ತೆಗೆದುಕೊಳ್ಳುವಂತಿಲ್ಲ. ಎಲ್ಲರೂ ಮೊಬೈಲ್ ಕರೆ ಸ್ವೀಕರಿಸಬೇಕು. ಇಲ್ಲದ ನೆಪ ಹೇಳುವಂತಿಲ್ಲ. ಛಾವಣಿ ಸೋರುತ್ತಿರುವ, ಕೆಳಹಂತದಲ್ಲಿ ನೀರು ಬರುವ ಶಾಲೆ ಕೊಠಡಿಗಳಲ್ಲಿ ಮಕ್ಕಳನ್ನು ಕೂಡಿಸಬಾರದು. ನಗರದಲ್ಲಿರುವ ತೆರೆದ ಚರಂಡಿಗಳನ್ನು ಜೆಸಿಬಿಯಿಂದ ಸ್ವಚ್ಛಗೊಳಿಸಿ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗದಂತೆ ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.
ಕರೆಂಟ್ ಹೋದರೆ ಸಮಸ್ಯೆಯಾಗುತ್ತದೆ. ಹೀಗಾಗಿ ಮುಂಚಿತವಾಗಿ ನೀರಿನ ಟ್ಯಾಂಕ್ ತುಂಬಿಸಬೇಕು. ಯಾವುದೇ ಕರೆ ಬಂದ ತಕ್ಷಣ ತಹಸೀಲ್ದಾರ್, ತಾಪಂ ಇಒ, ಅಗ್ನಿಶಾಮಕ ದಳ, ಜೆಸ್ಕಾಂ, ಆರೋಗ್ಯ ಇಲಾಖೆ ಇತರ ಅಧಿಕಾರಿಗಳು ಸಂಘಟಿತರಾಗಿ ಕೆಲಸ ಮಾಡಬೇಕು. ಆಗಲೇ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗಲಿದೆ ಎಂದರು.
ಜಿಪಂ ಸಿಇಒ ಶಿಲ್ಪಾ ಎಂ. ಮಾತನಾಡಿ, ಪಿಡಿಒಗಳು ಕೇಂದ್ರ ಸ್ಥಾನದಲ್ಲಿ ಇದ್ದು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಮಳೆ ಹೆಚ್ಚಾದಾಗ ಮುಂಜಾಗ್ರತೆ ವಹಿಸದಿದ್ದರೆ ಅನಾಹುತ ಸಂಭವಿಸಬಹುದು. ಹೀಗಾಗಿ ಎಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಎಸ್ಪಿ ಚನ್ನಬಸವಣ್ಣ ಲಂಗೋಟಿ ಮಾತನಾಡಿ, ಪೊಲೀಸ್ ಅಧಿಕಾರಿಗಳಲ್ಲಿ ವೈರ್ಲೆಸ್ ಇರಬೇಕು. ವಾಕಿಟಾಕಿ ಕ್ಯಾರಿ ಮಾಡಬೇಕು. ಎಲ್ಲ ಮಾಹಿತಿ ತಕ್ಷಣ ಕಂಟ್ರೋಲ್ ರೂಮ್ಗೆ ರವಾನಿಸಬೇಕು ಎಂದರು.
ವಿಡಿಯೋ ಸಂವಾದದಲ್ಲಿ ಸಹಾಯಕ ಆಯುಕ್ತ ರಮೇಶ ಕೋಲಾರ, ಎಲ್ಲ ತಹಸೀಲ್ದಾರ್, ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.