ಬೀದರ್: ನಗರ ಸೇರಿ ಜಿಲ್ಲೆಯ ಬಹುತೇಕ ಕಡೆ ಬುಧವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಉತ್ತಮ ಮಳೆಯಾಗಿದೆ. ಸತತ ನಾಲ್ಕು ಗಂಟೆ ಸುರಿದ ಸಾಧಾರಣ ಮಳೆಯು ಮುಂಗಾರು ಬೆಳೆಗಳಿಗೆ ಪೂರಕವಾಗಿದ್ದು, ರೈತರಲ್ಲಿ ಖುಷಿ ತಂದಿದೆ.
ಬೆಳಗ್ಗೆಯಿಂದಲೇ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮದ್ಯಾಹ್ನ 12ಕ್ಕೆ ಶುರುವಾದ ಮಳೆ ಸಂಜೆ 4ರವರೆಗೆ ಸುರಿದಿದೆ. ಆಗಾಗ್ಗೆ ಜಿಟಿಜಿಟಿ ಮಳೆ ಬಂದರೆ, ಮತ್ತೆ ಕೆಲಕಾಲ ಮುಸಲಧಾರೆ ಇತ್ತು. ಇದು ಮಧ್ಯಾಹ್ನದಿಂದ ಸಂಜೆಯವರೆಗೆ ಸಾಮಾನ್ಯ ಜನಜೀವನ ಪ್ರಭಾವಿತಗೊಳಿಸಿತು.
ಮಳೆಗಾಲ ಆರಂಭದ ನಂತರ ಇದೇ ಮೊದಲ ಬಾರಿ ನಗರ ಸೇರಿ ಎಲ್ಲೆಡೆ ಕಡೆ ಇಷ್ಟೊಂದು ಸುದೀರ್ಘ ಅವಧಿ ಉತ್ತಮ ಮಳೆಯಾಗಿದೆ. ಈ ಮಳೆಯಿಂದ ಹಳ್ಳ, ಕೊಳ್ಳಗಳಿಗೆ ನೀರು ಬಂದಿದೆ. ಬಾವಿಗಳ ನೀರು ನಾಲ್ಕೈದು ಅಡಿ ಹೆಚ್ಚಿಸಿದೆ. ನಾಲ್ಕು ಗಂಟೆಯ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 25 ಮಿ.ಮೀ.ಮಳೆಯಾಗಿರುವ ಬಗ್ಗೆ ಅಂದಾಜಿಸಲಾಗಿದೆ.
ನಗರವಲ್ಲದೆ ಜಿಲ್ಲೆಯ ಭಾಲ್ಕಿ, ಔರಾದ್, ಬಸವಕಲ್ಯಾಣ, ಹುಮನಾಬಾದ್, ಚಿಟಗುಪ್ಪ, ಹುಲಸೂರು, ಕಮಲನಗರ ತಾಲೂಕಿನ ಬಹುತೇಕ ಕಡೆ ಸಹ ಉತ್ತಮ ಮಳೆ ಬಿದ್ದಿದೆ. ಜಿಲ್ಲೆಯಲ್ಲಿ ಇನ್ನೂ ಕಾಮರ್ೋಡ ಕವಿದಿದೆ. ಗುರುವಾರ ಇನ್ನಷ್ಟು ಮಳೆ ಬೀಳುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಸಲ ಜಿಲ್ಲೆಯಲ್ಲಿ ಜೂನ್ ಆರಂಭದಿಂದಲೇ ಆಗಾಗ್ಗೆ ಉತ್ತಮ ಮಳೆಯಾಗುತ್ತಿದ್ದು, ರೈತರಿಗೆ ಮುಂಗಾರು ಬೆಳೆಗಳು ಕೈ ಹಿಡಿಯುವ ಭರವಸೆ ಮೂಡಿಸಿದೆ.