ಬೀದರ್: ಜಿಲ್ಲೆಯಲ್ಲಿ ಕರೊನಾ ಎರಡನೇ ಅಲೆಯ ಕ್ರೌರ್ಯ ಮುಂದುವರಿದಿದೆ. ಸೋಮವಾರ ಮತ್ತೆ 27 ಮಂದಿಗೆ ಸೋಂಕು ತಗುಲಿದೆ. ಭಾನುವಾರ 36 ಮಂದಿಗೆ ಪಾಸಿಟಿವ್ ಬಂದಿತ್ತು. ಸೋಮವಾರ ಹೊಸದಾಗಿ 27 ಸೋಂಕಿತರು ಪತ್ತೆಯಾಗಿದ್ದಾರೆ. ಎರಡೇ ದಿನದಲ್ಲಿ 63 ಮಂದಿಗೆ ವೈರಸ್ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಕರೊನಾ ಸಾಕಷ್ಟು ತಲ್ಲಣವೇ ಸೃಷ್ಟಿಸಿದೆ. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಾಡಲೂರ ಸತ್ಯನಾರಾಯನಾಚಾರ್ಯ ಸೇರಿದಂತೆ 11 ಸಿಬ್ಬಂದಿಗೆ ಸೋಮವಾರ ಪಾಸಿಟಿವ್ ಬಂದಿದೆ. ಮೂರು ದಿನಗಳ ಹಿಂದೆ ಹಿರಿಯ ವಕೀಲ, ನಿವೃತ್ತ ತಹಸೀಲ್ದಾರ್ ಜಗನ್ನಾಥ ಸಿರ್ಸೆ ಸೋಂಕಿಗೆ ಬಲಿಯಾಗಿದ್ದರು. ಇದರ ಬೆನ್ನಲ್ಲೇ ಜಿಲ್ಲಾ ಪ್ರಧಾನ ನ್ಯಾಯಾಲಯದ ಗಣಕ ವಿಭಾಗ ಮುಖ್ಯಸ್ಥ ಸಂಜಯಕುಮಾರ ಪಾಟೀಲ್ ಅವರಿಗೆ ಪಾಸಿಟಿವ್ ಬಂದಿತ್ತು. ಇವರ ಸಂಪರ್ಕದ ಹಿನ್ನೆಲೆಯಲ್ಲಿ ನ್ಯಾಯಾಧೀಶರು, ಸಿಬ್ಬಂದಿ ಟೆಸ್ಟ್ ನಡೆಸಿದಾಗ 11 ಮಂದಿಯಲ್ಲಿ ಸೋಂಕು ದೃಢವಾಗಿದೆ.
ಕರೊನಾ ಸೋಂಕಿತರು ಹಾಗೂ ಸಂಪರ್ಕಕ್ಕೆ ಬಂದವರ ಪತ್ತೆ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಬಿಟ್ಟರೆ ಉಳಿದ ಕೋಟ್೯ ನಲ್ಲಿನ ಕಲಾಪ ನಡೆಯಲಿಲ್ಲ. ಕಕ್ಷಿದಾರರಿಗೆ ವಿಚಾರಣೆಯ ಮುಂದಿನ ದಿನಾಂಕ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೆಚ್ಚಿನ ಸಿಬ್ಬಂದಿಗೆ ಪಾಸಿಟಿವ್ ಬಂದ ಕಾರಣ, ಇಲ್ಲಿನ ಇನ್ನಷ್ಟು ಸಂಪರ್ಕಿತರ ಟೆಸ್ಟ್ ಗೆ ಕ್ರಮ ಕೈಗೊಳ್ಳಲಾಗಿದೆ. ಹಲವು ವಕೀಲರು ಸಹ ಸಿಬ್ಬಂದಿಗಳ ಸಂಪರ್ಕಕ್ಕೆ ಬಂದಿರುವುದರಿಂದ ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ಸೋಮವಾರ 36ಕ್ಕೂ ಹೆಚ್ಚು ವಕೀಲರ ಟೆಸ್ಟ್ ನಡೆಸಲಾಗಿದ್ದು, ಮಂಗಳವಾರ ಇವರೆಲ್ಲರ ವರದಿ ಏನು ಬರಲಿದೆಯೋ? ಎಂಬ ತಳಮಳ ಮೂಡಿದೆ.
ಹಲವರಿಗೆ ಸೋಂಕು ತಗುಲಿದ ಕಾರಣ ಜಿಲ್ಲಾ ವಕೀಲರ ಸಂಘದ ಕಚೇರಿ ಸೇರಿದಂತೆ ವಿವಿಧ ಶ್ರೇಣಿಗಳ ನ್ಯಾಯಾಲಯ ಆವರಣ ಶುಚಿಗೊಳಿಸಲಾಗಿದೆ.
ನ್ಯಾಯಾಧೀಶರು, ಸಿಬ್ಬಂದಿಗೆ ಸೋಂಕು ತಗುಲಿದ ಕಾರಣ ಹೈಕೋಟ್೯ ನ್ಯಾಯಮೂರ್ತಿ, ಮೇಲಧಿಕಾರಿಗಳ ನಿರ್ದೇಶನ ಪ್ರಕಾರ ಕೋಟ್೯ ಕಲಾಪ ನಡೆಸುವ ವಿಷಯದಲ್ಲಿ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ ಎಂದು ತಿಳಿದುಬಂದಿದೆ.