ಮೈಸೂರು: ಚಿಲ್ಲರೆ ಬೀಡಿ, ಸಿಗರೇಟ್ ವ್ಯಾಪಾರಕ್ಕೂ ಲೈಸೆನ್ಸ್ ಕಡ್ಡಾಯಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ಸಣ್ಣ ಬೀಡಿ-ಸಿಗರೇಟು ಮಾರಾಟಗಾರರ ಸಂಘದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಸರ್ಕಾರದ ಕ್ರಮವನ್ನು ವಿರೋಧಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಸಣ್ಣ ಬೀಡಿ-ಸಿಗರೇಟು ಮಾರಾಟಗಾರರ ಸಂಘದ ಅಡಿಯಲ್ಲಿ 50 ಸಾವಿರಕ್ಕೂ ಹೆಚ್ಚು ಚಿಲ್ಲರೆ ವ್ಯಾಪಾರಿಗಳು ಜೀವನ ಕಂಡುಕೊಂಡಿದ್ದಾರೆ. ಆದರೆ ಸರ್ಕಾರ ಚಿಲ್ಲರೆ ಮಾರಾಟಕ್ಕೂ ಲೈಸೆನ್ಸ್ ಕಡ್ಡಾಯಗೊಳಿಸಲು ಮುಂದಾಗಿರುವುದರಿಂದ ಸಣ್ಣ ವ್ಯಾಪಾರಸ್ಥರು ತೊಂದರೆಗೆ ಸಿಲುಕಲಿದ್ದಾರೆ ಎಂದು ದೂರಿದರು.
ಕೋವಿಡ್ ಲಾಕ್‌ಡೌನ್ ಸೇರಿದಂತೆ ಸರ್ಕಾರದ ನಿರ್ಬಂಧಗಳಿಂದ ಕೆಲ ವರ್ಷಗಳಿಂದ ಈಗಾಗಲೇ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ. ತಂಬಾಕು ಕಾನೂನು ಅನುಷ್ಠಾನದ ನೆಪದಲ್ಲಿ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಶೋಷಣೆ ಭ್ರಷ್ಟಾಚಾರ ಹೆಚ್ಚಿಸುತ್ತಿವೆ,
ಮಾರಾಟಗಾರರು ಲೈಸೆನ್ಸ್ ಪಡೆಯಬೇಕು, ಪ್ರತಿವರ್ಷ ಲೈಸೆನ್ಸ್ ನವೀಕರಣ ಮಾಡಿಕೊಳ್ಳಬೇಕು. ಚಿಲ್ಲರೆ ವ್ಯಾಪಾರಿಗಳಿಗೆ ಲೈಸನ್ಸ್ ಪ್ರದರ್ಶಿಸುವುದು ಮತ್ತು ಸಲಹಾ ಪುಸ್ತಕ ಇರಿಸುವುದು ಹಲವು ಜವಾಬ್ದಾರಿಗಳಿದ್ದರೂ ಇವುಗಳೊಂದಿಗೆ ನಿಯಂತ್ರಣಕ್ಕೆ ಹೊಂದಾಣಿಕೆ ಇಲ್ಲದಿದ್ದಲ್ಲಿ ಹೆಚ್ಚಿನ ದಂಡ ವಿಧಿಸಲಾಗುತ್ತದೆ. ಆದರೆ ಹೆಚ್ಚಿನ ಜನರು ಅನಕ್ಷರಸ್ಥರಾಗಿರುವುದರಿಂದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ದೂರಿದರು.
ಹೀಗಾಗಿ ನಗರಾಭಿವೃದ್ಧಿ ಇಲಾಖೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಲೈಸನ್ಸ್ ಪಡೆಯುವ ಕರ್ನಾಟಕ ಮುನಿಸಿಪಾಲಿಟಿಗಳ ಮಾದರಿ ಬೈಲಾ ಅನುಷ್ಠಾನ ಮಾಡಬಾರದು. ಬದಲಿಗೆ ಕರೊನಾ ವೈರಸ್ ಸಾಂಕ್ರಾಮಿಕದಿಂದ ಉಂಟಾದ ಆದಾಯ ನಷ್ಟದಿಂದ ಹೊರಬರಲು ನೆರವಾಗಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಗುರುಸ್ವಾಮಿ, ಮುಖಂಡರಾದ ನೂರುಲ್ಲಾ, ಕೀರ್ತಿ, ಶಬ್ಬೀರ್, ಸೌಕತ್, ಮೋಹನ್, ರಾಜೇಂದ್ರ, ನಾರಾಯಣಶೆಟ್ಟಿ, ಪ್ರದೀಪ್, ಪ್ರಕಾಶ್, ಗುರುದೇವ್, ರಾಜಾರಾಂ, ರಾಮದೇವ್ ಇತರರು ಇದ್ದರು.