oppo_2 
ಜಿಲ್ಲೆ

ಬೀಡಿ, ಸಿಗರೇಟ್, ತಂಬಾಕು ಉತ್ಪನ್ನಗಳ ಸೇವನೆ ಜೀವಕ್ಕೆ ಕುತ್ತು

ಚಿತ್ರದುರ್ಗ:ಬೀಡಿ, ಸಿಗರೇಟು, ತಂಬಾಕು ಉತ್ಪನ್ನಗಳ ಸೇವನೆ ಜೀವಕ್ಕೆ ಕುತ್ತು ಎಂಬ ಅರಿವು ಯುವ ಪೀಳಿಗೆಯಲ್ಲಿ ಭಿತ್ತಬೇಕು ಎಂದು 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಉಜ್ವಲಾವೀರಣ್ಣ ಸಿದ್ದಣ್ಣವರ್ ಹೇಳಿದರು.
ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ನಗರದ ಅಮೃತ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ‌್ಯಕ್ರಮ ಉದ್ಘಾಟಿಸಿಮಾತನಾಡಿದರು.
ತಂಬಾಕು, ಮದ್ಯ ಮೊದಲಾದ ದುಶ್ಚಟಗಳಿಂದಾಗುವ ಹಾನಿ ಕುರಿತು ಯಾವುದೇ ಕ್ಷೇತ್ರದ ವ್ಯಕ್ತಿ ಹೇಳಿದರೆ ವ್ಯಸನಿಗಳು ಕೇಳುವುದಿಲ್ಲ. ವೈದ್ಯರು ಹೇಳಿದರೆ ಕೇಳುತ್ತಾರೆ. ಮುಂದೆ ವೈದ್ಯರಾಗುವಂಥ ನೀವು ವ್ಯಸನಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.
ತಂಬಾಕು ಉತ್ಪನ್ನಗಳ ಮೇಲೆ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಚಿತ್ರ ಪ್ರಕಟಿಸಿದರೂ ಅವುಗಳ ಸೇವನೆ ಮುಂದುವರಿದಿದೆ ಎಂದು ವಿಷಾದಿಸಿದರು.
ಜಿಲ್ಲಾಸ್ಪತ್ರೆ ದಂತ ವೈದ್ಯಾಧಿಕಾರಿ ಡಾ.ಪ್ರಸನ್ನಕುಮಾರ್ ಮಾತನಾಡಿ, ತಂಬಾಕು ಉತ್ಪನ್ನಗಳನ್ನು ಉಪಯೋಗಿಸುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಗಾಢವಾದ ಪರಿಣಾಮ ಬೀರುತ್ತದೆ. ತಂಬಾಕು ಸೇವನೆ ಸಾಮಾಜಿಕ ಪಿಡುಗಾಗಿದೆ. ತಂಬಾಕು, ಗುಟ್ಕಾ ಸೇವನೆಯಿಂದ ಕ್ಯಾನ್ಸರ್‌ನಂಥ ಭೀಕರ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ದುಶ್ಚಟಗಳನ್ನು ದೂರವಾಗಿಸಲು ಪ್ರತಿ ತಾಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮುಕ್ತರಾಗಲು ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಚಿತ್ರದುರ್ಗ ಜಿಲ್ಲೆ ತಂಬಾಕು ಉತ್ಪನ್ನಗಳ ಬಳಕೆಯಲ್ಲಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದ್ದು, ತಂಬಾಕು ಇತರ ಉತ್ಪನ್ನಗಳನ್ನು ಜಿಲ್ಲೆಯಲ್ಲಿ ನಿಷೇಧಿಸುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು.
ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ಪ್ರಧಾನ ಕಾರ‌್ಯದರ್ಶಿ ಆರ್.ಗಂಗಾಧರ್, ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ. ಚಂದ್ರಶೇಖರ್ ಕಂಬಾಳಿಮಠ, ಅಮೃತ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಚಾರ್ಯ ಡಾ.ಎಂ.ಎಸ್.ಪ್ರ ಶಾಂತ್ ಮತ್ತಿತರರು ಇದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯುಕ್ತಾಶ್ರಯದಲ್ಲಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

(ಸಿಟಿಡಿ 31 ತಂಬಾಕು)