ಮೈಸೂರು: ಭಾರತೀಯ ಸೇನೆ ಬೆಂಬಲಿಸಿ ನರಸಿಂಹರಾಜ ಕ್ಷೇತ್ರದ ವ್ಯಾಪ್ತಿಯ ಕಲ್ಯಾಣಗಿರಿಯ ಬೀಡಿ ಕಾರ್ಮಿಕರ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.
ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ ದೇಶದ ಸೈನಿಕರ ಆತ್ಮಸ್ಥೈರ್ಯ ತುಂಬಲು ಹಾಗೂ ಸಾರ್ವಜನಿಕರು ಸೇನೆಯೊಂದಿಗಿನ ಇರುವ ಸಂದೇಶ ಸಾರಲು ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೆ.ಆರ್ ಆಸ್ಪತ್ರೆಯ ರಕ್ತನಿಧಿ ಕೇಂದ್ರ ಮತ್ತು ಜೀವಧಾರ ರಕ್ತನಿಧಿ ಕೇಂದ್ರ ಸಹಯೋಗದಲ್ಲಿ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ನಡೆದ ಬ್ಲಡ್‌ಕ್ಯಾಂಪ್‌ನಲ್ಲಿ ನೂರಾರು ಜನರು ಭಾಗಿಯಾಗಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.
ಶಾಸಕ ತನ್ವಿರ್ ಸೇಠ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕುಮಾರಸ್ವಾಮಿ ಇನ್ನಿತರರಿದ್ದರು.
ಕದನ ವಿರಾಮ ಘೋಷಣೆಗೆ ದೇಶದಲ್ಲಿ ಪರ ವಿರೋಧ ಚರ್ಚೆಯಾಗುತ್ತಿದೆ. ಆದರೆ, ಈ ವಿಚಾರವಾಗಿ ಟೀಕೆ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ.
ಕದನ ವಿರಾಮ ಘೋಷಣೆ ಕುರಿತು ಉಭಯ ರಾಷ್ಟ್ರಗಳ ನಡುವೆ ಅಮೆರಿಕ ಮಧ್ಯಸ್ಥಿಕೆ ವಹಿಸಿ ಮಾತುಕತೆ ಮೂಲಕ ಬಗೆಹರಿಸುವ ಪ್ರಯತ್ನ ಮಾಡಿದೆ. ಇದು ಸರಿಯಲ್ಲ ಎನ್ನುವ ಕೀಳುಮಟ್ಟದ ರಾಜಕೀಯ ಮಾಡುವುದು ಸರಿಯಲ್ಲ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಏನು ನಿರ್ಧಾರ ತೆಗೆದುಕೊಂಡಿದೆಯೋ ಅದಕ್ಕೆ ನಾವು ಬದ್ಧರಾಗಿರಬೇಕು. ದೇಶದ ವಿಚಾರ ಬಂದಾಗ ಆಕ್ಷೇಪಾರ್ಹ ಹೇಳಿಕೆ ಕೊಡಬಾರದು ಎಂದು ಹೇಳಿದರು.