ಜಿಲ್ಲೆ

ಬೀಜ ವ್ಯಾಪಾರಿ ಮಳಿಗೆ ಮೇಲೆ ದಾಳಿ

ಕೆಂಭಾವಿ: ಪಟ್ಟಣದಲ್ಲಿ ಮಂಗಳವಾರ ವಿಭಾಗೀಯ ಜಾರಿದಳ ಉಪಕೃಷಿ ನಿರ್ದೇಶಕ ರಾಧಾಕೃಷ್ಣ ಎಸ್.ಜಿ. ನೇತೃತ್ವದ ತಂಡ ಕೀಟನಾಶಕ, ಬೀಜ ವ್ಯಾಪಾರ ಮತ್ತು ರಸಗೊಬ್ಬರ ಮಾರಾಟ ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲಿಸಿತು.

ಪಟ್ಟಣದ ಹಲವು ಕೀಟನಾಶಕ, ಬೀಜ ಮತ್ತು ರಸಗೊಬ್ಬರ ಅಂಗಡಿಗಳ ಮೇಲೆ ದಾಳಿ ಮಾಡಿದ ಜಾಗೃತ ದಳದ ತಂಡ ರೈತರಿಗೆ ನೀಡಲಾಗುತ್ತಿರುವ ಕೀಟನಾಶಕ ಮತ್ತು ರಸಗೊಬ್ಬರ ಕುರಿತು ಸಮಗ್ರ ಮಾಹಿತಿ ಪಡೆದರು.

ಸರ್ಕಾರದ ನಿಯಮಾನುಸಾರ ರೈತರಿಗೆ ಸರಿಯಾದ ರೀತಿಯಲ್ಲಿ ಗೊಬ್ಬರ, ಬೀಜ ಮತ್ತು ಕೀಟನಾಶಕ ನೀಡಲಾಗುತ್ತಿದೆಯೆ, ನಕಲಿ ಕಂಪನಿಗಳ ಗೊಬ್ಬರದ ಮಾರಾಟ ನಡೆಯುತ್ತಿದೆಯೆ, ಕೃಷಿ ಇಲಾಖೆಯಿಂದ ಪರವಾನಿಗೆ ಪಡೆಯಲಾಗಿದೆ ಎಂಬುದನ್ನು ಪರಿಶೀಲಿಸಿತು. ಸಹಾಯಕ ಕೃಷಿ ನಿರ್ದೇಶಕ ಶೇಖಪ್ಪ ತಳವಾರ, ಭೀಮರಾಯ ಹವಾಲ್ದಾರ, ಕೃಷಿ ಅಧಿಕಾರಿಗಳಾದ ವಿನಾಯಕ, ಶ್ರೀಧರ, ವಾದಿರಾಜ ಕುಲಕರ್ಣಿ, ಮಹೆಬೂಬ್ ಬೇಗ್ ತಂಡದಲ್ಲಿದ್ದರು.

ಪಟ್ಟಣಕ್ಕೆ ಜಾಗೃತ ದಳ ಬಂದಿದೆ ಎಂಬ ವಿಷಯ ಅರಿಯುತ್ತಲೇ ಹಲವು ರಸಗೊಬ್ಬರ ಮತ್ತು ಕೀಟನಾಶಕ ಅಂಗಡಿಗಳ ವ್ಯಾಪಾರಸ್ಥರು ಅಂಗಡಿಗಳ ಸೆಟರ್ ಬಂದ್ ಮಾಡಿ ಮನೆಯತ್ತ ಹೆಜ್ಜೆ ಹಾಕಿದ ದೃಶ್ಯ ಕಂಡು ಬಂತು.