ಹನೂರು: ತಾಲೂಕಿನ ಚಿಂಚಳ್ಳಿ ಗ್ರಾಮದ ಪ್ರಗತಿಪರ ರೈತ ದಯಾನಂದ್ ಅವರ ಜಮೀನಿನಲ್ಲಿ ಜು.3 ರಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಬೀಜ ಬಿತ್ತನೆ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಅಗತ್ಯ ಸಿದ್ಧತೆ ನಡೆದಿದೆ.
ಗ್ರಾಮದ ಪಿ. ದಯಾನಂದ್ ಅವರು ಪ್ರಗತಿಪರ ರೈತರಾಗಿದ್ದು, ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಲುಗಮೂಲೆ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ 45 ಎಕರೆ ಜಮೀನನ್ನು ಹೊಂದಿದ್ದು, ಇಲ್ಲಿ ತೇಗ, ಹೊನ್ನೆ, ಬೀಟೆ, ಮಹಾಗನಿ, ಶ್ರೀಗಂಧ ಇನ್ನಿತರ ವಿವಿಧ ಜಾತಿಯ ಮರಗಳು, ಮಾವು, ನೇರಳೆ, ಹಲಸು, ಸೀತಾಫಲ, ವಾಟರ್ ಆ್ಯಪಲ್, ಬಟರ್ ಫ್ರೂಟ್‌ಇತರ ಹಣ್ಣುಗಳು, ಬಿದಿರು, ಔಷಧ ಗಿಡಗಳನ್ನು ಸಮೃದ್ಧವಾಗಿ ಬೆಳೆಸಿದ್ದಾರೆ. ಜಮೀನನ್ನು ಪ್ರಕೃತಿಯ ತಾಣವಾಗಿ ಮಾರ್ಪಡಿಸಿದ್ದಾರೆ. ಹಾಗಾಗಿ, ಇವರ ಜಮೀನಿನಲ್ಲೇ ಸಚಿವ ಎನ್. ಚಲುವರಾಯಸ್ವಾಮಿ ಅವರು ಬೀಜ ಬಿತ್ತನೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಮಕ್ಕಳಿಗೆ ಮಾವಿನ ಹಣ್ಣು ತಿನ್ನುವ ಸ್ಪರ್ಧೆಯನ್ನು ಆಯೋಜಿಸಿದ್ದು, ಚಿಂಚಳ್ಳಿ ಹಾಗೂ ಮಣಗಳ್ಳಿ ಸರ್ಕಾರಿ ಶಾಲೆಯ ಮಕ್ಕಳು ಭಾಗವಹಿಸಿದ್ದರು. ವಿಜೇತರಾದವರಿಗೆ ಕೃಷಿ ಸಚಿವರಿಂದಲೇ ಬಹುಮಾನ ವಿತರಣೆಯಾಗಲಿದೆ. ಜಮೀನಿನ ಒಂದು ಎಕರೆಯಲ್ಲಿ ರಾಗಿ ಬಿತ್ತನೆ ಕಾರ್ಯ ನಡೆಯಲಿದ್ದು, ಇದಕ್ಕೆ ಸಚಿವರು ಚಾಲನೆ ನೀಡಲಿದ್ದಾರೆ. ಹಾಗಾಗಿ, ಭೂಮಿಯನ್ನು ಉಳುಮೆ ಮಾಡಿಸಿ ಹದಗೊಳಿಸಲಾಗಿದೆ. ಜಮೀನಿನಲ್ಲಿಯೇ ರೈತರೊಂದಿಗೆ ವೇದಿಕೆ ಕಾರ್ಯಕ್ರಮವೂ ನಡೆಯಲಿದೆ. ಸಚಿವರು ಅಧಿಕಾರಿಗಳೊಂದಿಗೆ ಜಮೀನಿನನ್ನು ವೀಕ್ಷಣೆ ಮಾಡಲಿದ್ದಾರೆ.
ಬುಧವಾರ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಬೀದ್, ಸಹಾಯಕ ನಿರ್ದೇಶಕರಾದ ಕೊಳ್ಳೇಗಾಲದ ರಂಗಸ್ವಾಮಿ, ಚಾ.ನಗರದ ನಿಶಾಂತ್, ಕೃಷಿ ಅಧಿಕಾರಿಗಳಾದ ನಾಗೇಂದ್ರ, ಮನೋಹರ್, ಆರ್‌ಐ ಶೇಷಣ್ಣ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಬೀಜ ಬಿತ್ತನೆ ಕಾರ್ಯ, ವೇದಿಕೆ ಕಾರ್ಯಕ್ರಮ ಹಾಗೂ ಊಟದ ವ್ಯವಸ್ಥೆ ಸುವ್ಯವಸ್ಥಿತವಾಗಿ ಆಯೋಜಿಸುವಂತೆ ತಿಳಿಸಲಾಯಿತು. ಇನ್‌ಸ್ಪೆಕ್ಟರ್ ಸಿ. ಆನಂದಮೂರ್ತಿ ಅವರು ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ಸಂಬಂಧ ಪರಿಶೀಲನೆ ನಡೆಸಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.