ಬಾಗಲಕೋಟೆ: ಪ್ರಸಕ್ತ ಮುಂಗಾರು ಹಂಗಾಮಿಗೆ ಜಿಲ್ಲೆಯ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಮುಂಗಾರು ಹಂಗಾಮಿನ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಹಂಗಾಮಿಗೆ ಬಿತ್ತನೆ ಬೀಜ, ರಸಗೊಬ್ಬರ ಅಭಾವವಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಕಳೆದ ಹಂಗಾಮಿಗೆ ಕುಳಗೇರಿಯಲ್ಲಿ ಬೀಜ ಮತ್ತು ರಸಗೊಬ್ಬರದ ಕೊರತೆ ಉಂಟಾಗಿತ್ತು. ಪ್ರಸಕ್ತ ಹಂಗಾಮಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಬಾದಾಮಿ ತಹಸೀಲ್ದಾರರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲಿಸಲು ಸೂಚಿಸಿದರು.
ನಕಲಿ ಬೀಜ, ಗೊಬ್ಬರ ವಿತರಣೆ ಆಗದಂತೆ ಕಟ್ಟೆಚ್ಚರ ವಹಿಸಬೇಕು. ಗೊಬ್ಬರ ಮತ್ತು ಬೀಜದ ಕೃತಕ ಅಭಾವ ಸೃಷ್ಟಿಯಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಕೃಷಿ ಮಾರಾಟ ಕೇಂದ್ರಗಳಿಗೆ ವೀಚಕ್ಷಣಾ ಅಧಿಕಾರಿಗಳ ತಂಡ ನಿರಂತರವಾಗಿ ಭೇಟಿ ನೀಡುವಂತೆ ಜಂಟಿ ಕೃಷಿ ಅಽಕಾರಿಗಳಿಗೆ ಸಿಇಒ ಸೂಚಿಸಿದರು. ಪ್ರಸಕ್ತ ಹಂಗಾಮಿಗೆ ಜಿಲ್ಲೆಗೆ ಬೇಕಾಗುವ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಮಾಹಿತಿಯನ್ನು ಪಡೆದುಕೊಂಡರು.
ಸಹಾಯಕ ಕೃಷಿ ಅಧಿಕಾರಿ ಎಸ್.ಬಿ.ಹಳ್ಳೊಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಅಂದಾಜು ೧.೬ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಲಿದ್ದು, ಜಿಲ್ಲೆಯಲ್ಲಿ ಒಟ್ಟಾರೆಯಾಗಿ ೧೯೩೯೨ ಕ್ಷಿಂಟಲ್ ಬಿತ್ತನೆ ಬೀಜದ ಪ್ರಮಾಣ ಬೇಕಾಗಿದೆ. ಈಗಾಗಲೇ ತೊಗರಿ, ಉದ್ದು, ಹೆಸರು, ಸೋಯಾ ಅವರೆ ಬೀಜಗಳ ದಾಸ್ತಾನು ಪ್ರಾರಂಭವಾಗಿದೆ. ಇನ್ನು ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳ ದಾಸ್ತಾನು ಪಡೆದುಕೊಂಡು ವಿತರಣೆಗೆ ಕ್ರಮವಹಿಸಲಾಗುತ್ತಿದೆ. ಯೂರಿಯಾ ೨೬೭೪೫ ಟನ್, ಡಿಎಪಿ ೧೧೮೭೫ ಟನ್, ಕಾಂಪ್ಲೇಕ್ಸ್ ೨೯೪೮೪ ಟನ್, ಎಂ.ಒ.ಪಿ ೮೯೨ ಹಾಗೂ ಎಸ್.ಎಸ್.ಪಿ ೨೧೫೭ ಟನ್ ಸೇರಿ ಒಟ್ಟು ೭೧೧೫೩ ಟನ್ ಗೊಬ್ಬರದ ಲಭ್ಯವಿರುವುದಾಗಿ ಸಭೆಗೆ ತಿಳಿಸಿದರು.
ಮುಂಗಾರು ಪೂರ್ವ ಹಾನಿ ವಿವರ :
ಪೂರ್ವ ಮುಂಗಾರು ಮಳೆಯಿಂದಾಗಿ ಮಾ.೧೫ ರಿಂದ ಇಲ್ಲಿಯವರೆಗೆ ಬಾಗಲಕೋಟೆ ತಾಲೂಕಿನಲ್ಲಿ ೧, ಜಮಖಂಡಿ ೯ ಹಾಗೂ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ೮ ಮನೆಗಳು ಸೇರಿ ಒಟ್ಟು ೧೮ ಮನೆಗಳು ಭಾಗಶಃ ಹಾನಿಗೊಳಗಾಗಿವೆ. ೨೫ ಜಾನುವಾರುಗಳು ಸಹ ಹಾನಿಗೊಳಗಾಗಿವೆ. ಕೃಷಿ ೧೮೦ ಹೆಕ್ಟೇರ್ ಹಾಗೂ ತೋಟಗಾರಿಕೆ ೬೦೬.೪೮ ಹೆಕ್ಟೇರ್ ಸೇರಿ ಒಟ್ಟು ೭೮೬.೪೮ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುತ್ತದೆ ಎಂದು ಸಭೆಗೆ ತಿಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಹಕ್ಕರಕಿ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನಬಸಪ್ಪ ಕೊಡ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಽಕಾರಿಗಳು ಉಪಸ್ಥಿತರಿದ್ದರು.