ಜಿಲ್ಲೆ

ಬಿಸಿಲಿನ ದುಷ್ಪರಿಣಾಮ ಮುನ್ನೆಚ್ಚರಿಕೆ ವಹಿಸಿ

ಬೀದರ್: ಹೆಚ್ಚುತ್ತಿರುವ ಉಷ್ಣಾಂಶ ಹಾಗೂ ಬಿಸಿ ಗಾಳಿಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮ ತಡೆಯಲು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಖ್ಯಾತ ಚರ್ಮ ರೋಗ ತಜ್ಞ ಡಾ. ಅಶೋಕಕುಮಾರ ನಾಗೂರೆ ಸಲಹೆ ನೀಡಿದರು.
ಇಲ್ಲಿಯ ಬಸವೇಶ್ವರ ಕಾಲೊನಿಯ ಬಾಲಾಜಿ ಸ್ಕಿನ್ ಕೇರ್ ಸೆಂಟರ್‍ನ ಸಿ.ಎಂ.ಇ. ಹಾಲ್‍ನಲ್ಲಿ ಆಯೋಜಿಸಿದ್ದ ‘ಬಿಸಿಲಿನಿಂದ ಆರೋಗ್ಯ ರಕ್ಷಣೆಗೆ ಅನುಸರಿಸಬೇಕಾದ ಕ್ರಮಗಳು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇದೆ. ಬಿಸಿಲಲ್ಲಿ ಹೆಚ್ಚು ಓಡಾಡಿದರೆ ತುರಿಕೆ, ಚರ್ಮ ಒಣಗುವಿಕೆ, ಕೆಂಪಾಗುವಿಕೆ, ಫೊಟೊ ಅಲರ್ಜಿ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅಸ್ಟ್ರೆಲಿಯಾದಲ್ಲಿ ಬಿಸಿಲು ಕಾನ್ಸರ್‍ಗೆ ಕಾರಣವಾದ ನಿದರ್ಶನಗಳೂ ಇವೆ ಎಂದರು.
ಬಿಸಿಲು ಮಕ್ಕಳಿಂದ ಹಿರಿಯರವರೆಗೆ ಎಲ್ಲರ ಮೇಲೂ ಸಮಾನ ಪರಿಣಾಮ ಬೀರುತ್ತದೆ. ಬೇಸಿಗೆ ಅಷ್ಟೇ ಅಲ್ಲ: ಬಿಸಿಲು ಇದ್ದಾಗಲೆಲ್ಲ ಆರೋಗ್ಯ ರಕ್ಷಣೆಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅವಶ್ಯಕ ಎಂದು ಅಭಿಪ್ರಾಯಪಟ್ಟರು.
ಸಾರ್ವಜನಿಕರು ಮಧ್ಯಾಹ್ನ ಹೆಚ್ಚು ಬಿಸಿಲಲ್ಲಿ ಓಡಾಡಬಾರದು. ಬಹುತೇಕ ಕೆಲಸಗಳನ್ನು ಬೆಳಿಗ್ಗೆ ಹಾಗೂ ಸಂಜೆ ಮೇಲೆ ಮಾಡಿಕೊಳ್ಳಬೇಕು. ಈ ಮೂಲಕ ಬಿಸಿಲಿನಿಂದ ಆಗುವ ದುಷ್ಪಣಾಮಗಳಿಂದ ದೂರ ಇರಬೇಕು ಎಂದು ಕಿವಿಮಾತು ಹೇಳಿದರು.
ತಿಳಿ ಬಿಳಿ ಬಟ್ಟೆ ಧರಿಸಬೇಕು. ಹೊರಗಡೆ ಹೋಗುವುದು ಅನಿವಾರ್ಯವಾದರೆ ಸೂರ್ಯನ ಕಿರಣಗಳ ದುಷ್ಪರಿಣಾಮ ತಡೆಯುವ ಕ್ರಿಮ್‍ಗಳನ್ನು ಹಚ್ಚಿಕೊಳ್ಳಬೇಕು. ಹೆಚ್ಚು ಬೆವರು ಹೋಗಿ ಸನ್ ಸ್ಟ್ರೋಕ್ ಆಗುವ ಸಾಧ್ಯತೆಗಳು ಇರುವ ಕಾರಣ ಹೆಚ್ಚು ಹೆಚ್ಚು ನೀರು ಕುಡಿಯಬೇಕು. ಲಿಂಬೆ ಹಣ್ಣಿನ ರಸ, ಮಜ್ಜಿಗೆ ಸೇವಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕರಿಗೆ ಸನ್ ಸ್ಕ್ರಿನ್ ಕ್ರೀಮ್‍ಗಳನ್ನು ಉಚಿತವಾಗಿ ವಿತರಿಸಲಾಯಿತು.