ಶಿರಾ: ಚಿಕ್ಕಬಾಣಗೆರೆ ಸರ್ಕಾರಿ ಗೋಶಾಲೆಗೆ ಪೊಲೀಸರು ಏಕಾಏಕಿ ತಂದು ಬಿಟ್ಟಿರುವ 108 ಹಸುಗಳ ಪೈಕಿ ಒಂದು ಹಸು ಹಾಗೂ ಎಂಟು ಕರುಗಳು ಬಿಸಿಲಿನ ಧಗೆಗೆ ಸಾವನ್ನಪ್ಪಿದೆ.
ಸೂಕ್ತ ವ್ಯವಸ್ಥೆ ಹಾಗೂ ನಿರ್ವಹಣೆ ಇಲ್ಲದ ಗೋಶಾಲೆಯಲ್ಲಿ 50ಕ್ಕೂ ಹೆಚ್ಚು ಗರ್ಭ ಧರಿಸಿರುವ ಹಸುಗಳು ಕರುಗಳನ್ನು ಹಾಕಿದ್ದು, ಸೂಕ್ತವಾದ ಛಾವಣಿ ವ್ಯವಸ್ಥೆ ಕಲ್ಪಿಸಿದ ಕಾರಣ ಬಿಸಿಲಿನ ಧಗೆಗೆ ನರಳುತ್ತಿರುವ ದೃಶ್ಯ ಅಕ್ಕಪಕ್ಕದ ರೈತರ ಕಣ್ಣಂಚಿನಲ್ಲಿ ನೀರು ತರಿಸುತ್ತಿದೆ.
45ಕ್ಕೂ ಹೆಚ್ಚು ಹಸುಗಳು ಕರುಗಳಿಗೆ ಜನ್ಮ ನೀಡುವ ಸ್ಥಿತಿಯಲ್ಲಿವೆ. ಅವುಗಳನ್ನು ನೋಡಿಕೊಳ್ಳಲು ಅಲ್ಲೇ ಇರುವ ಮಹಾರಾಷ್ಟ್ರದ ರೈತರ ಗೋಳಂತೂ ಹೇಳತೀರದು, ಅವರ ಅಸಹಾಯಕತೆಗೆ ಸ್ಪಂದಿಸುತ್ತಿರುವ ರೈತರು ಮನೆ ಹಾಗೂ ಹೋಟೆಲ್ಗಳಿಂದ ಆಹಾರ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಗೋಶಾಲೆಯಲ್ಲಿದ್ದ 37 ಜಾನುವಾರು ಹಾಗೂ ಈಗ ಪೊಲೀಸರು ತಂದು ಬಿಟ್ಟಿರುವ 108 ಜಾನುವಾರುಗಳನ್ನು ನೋಡಿಕೊಳ್ಳಲು ಹಗಲು ಹಾಗೂ ರಾತ್ರಿ ಪಾಳಿಯಲ್ಲಿ ಇಬ್ಬರು ಗೋಪಾಲಕರನ್ನು ಪಶು ವೈದ್ಯ ಇಲಾಖೆಯಿಂದ ನೇಮಿಸಲಾಗಿದೆ. ಕೂಡಲೇ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹಸು, ಕರುಗಳ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಬಿಡುಗಡೆ ನಿರೀಕ್ಷೆಯಲ್ಲಿ ಮಹಾರಾಷ್ಟ್ರದ ರೈತರು
ಮಾ.3ರಂದು ತುಮಕೂರು ಪೊಲೀಸರು ಸುಮಾರು 11 ಟ್ರಕ್‌ಗಳಲ್ಲಿ ಕೋಲಾರದ ಚಿಂತಾಮಣಿಯಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದರು ಎನ್ನಲಾಗಿರುವ 108 ಎಚ್‌ಎ್ ತಳಿ ಹಸುಗಳನ್ನು ಗೋ ಹತ್ಯೆ ನಿಷೇಧ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಿ ವಶಪಡಿಸಿಕೊಂಡು ಚಿಕ್ಕಬಾಣಗೆರೆ ಗೋಶಾಲೆಗೆ ತಂದು ಬಿಟ್ಟಿದ್ದರು. ಮಹಾರಾಷ್ಟ್ರದ 25 ರಿಂದ 30 ರೈತರು ಹಸುಗಳನ್ನು ಕಾಪಾಡಲು ಸ್ಥಳದಲ್ಲೇ ಇದ್ದು, ಅವುಗಳನ್ನು ಅಕ್ಕಪಕ್ಕ ಬೆಳೆದಿರುವ ಮರಗಳಿಗೆ ಕಟ್ಟಿ ಹಾಕುವುದು, ಮೇಯಿಸುವುದು, ನೀರು ಕುಡಿಸುವ ಕಾಯಕ ಮಾಡಿಕೊಂಡು, ಇವತ್ತು ಅಥವಾ ನಾಳೆ ನಮ್ಮ ಹಸುಗಳು ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಿಂದ 20 ದಿನಗಳಿಂದ ನೆರಳಿಲ್ಲದೆ ಬಯಲಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪ್ರತಿ ಹಸುವಿಗೂ 7-10 ಕೆಜಿ ಮೇವು ಬೇಕಿದ್ದು, ಪ್ರತಿನಿತ್ಯ ಒಂದೂವರೆ ಟನ್ ಮೇವು ಬೇಕಾಗುತ್ತದೆ. ಮೇವು ಸರಬರಾಜು ವಿಳಂಬವಾದರೆ, ಹಸುಗಳು ಮೇವಿನ ಕೊರತೆಯನ್ನು ಎದುರಿಸಬೇಕಾಗುತ್ತದೆ.
ಯಾರು ಹೊಣೆ?
ಖರೀದಿದಾರರ ಪ್ರಕಾರ ಪ್ರತಿಯೊಂದು ಹಸುವಿಗೂ 70 ಸಾವಿರದಿಂದ ಒಂದು ಲಕ್ಷದವರೆಗೆ ಬೆಲೆ ಪಾವತಿಸಿ ಖರೀದಿಸಲಾಗಿದೆಯಂತೆ. ಆದರೆ ಗೋಶಾಲೆಯಲ್ಲಿ ಹಸುಗಳ ಜೀವಕ್ಕೆ ಕಿಂಚಿತ್ತೂ ಬೆಲೆ ಇಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಇಲ್ಲಿಗೆ ಬಂದಾಗ ದಷ್ಟಪುಷ್ಟವಾಗಿದ್ದ ಹಸುಗಳು, ಮೇವಿನ ಕೊರತೆಯಿಂದ ಸೊರಗುತ್ತಿವೆ, ಗೋಶಾಲೆಗೆ ಸೂಕ್ತ ಭದ್ರತೆ ಇಲ್ಲ, ಜಾನುವಾರು ಕಳ್ಳರು ಅಥವಾ ಕಾಡುಪ್ರಾಣಿಗಳು ದಾಳಿ ಮಾಡಿದರೆ ಆಗುವ ಅನಾಹುತಕ್ಕೆ ಯಾರು ಹೊಣೆ ? ಸತ್ತಿರುವ ಕರುಗಳು ಮತ್ತು ಹಸುಗಳಿಗೆ ಪರ್ಯಾಯವಾಗಿ ಪರಿಹಾರ ಕೊಡುವವರು ಯಾರು? ಹಸು ಮತ್ತು ಕರುಗಳ ಜೀವಕ್ಕೆ ಬೆಲೆಯೇ ಇಲ್ಲವೇ ಎಂದು ಖರೀದಿದಾರರು ಪ್ರಶ್ನಿಸಿದ್ದಾರೆ.
ಹಸುಗಳನ್ನು ಬಂಧಿಸಿರುವ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಅಧಿಕಾರಿಗಳಿಗೆ ಇದುವೇ ನೆಪವಾಗಿದೆ. ಒಂದೆರಡು ದಿನಗಳಲ್ಲಿ ಪ್ರಕರಣ ಮುಕ್ತಾಯಗೊಳಿಸಿ ಹಸುಗಳನ್ನು ಬಿಡುಗಡೆ ಮಾಡಬಹುದೆಂದು ಅಂದಾಜಿಸಿದ್ದ ರೈತರಿಗೆ ತಲೆನೋವಾಗಿದೆ.
ರೈತ ಸಂಘದಿಂದ ಮನವಿ
ಶಿರಾ ತಾಲೂಕು ಕಚೇರಿಗೆ ಶುಕ್ರವಾರ ತೆರಳಿದ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು, ಬಂಧಿಸಿರುವ ಹಸು ಕರಗಳನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ, ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ರವಾನಿಸಿದರು.
ಜಿಲ್ಲಾ ನಿರ್ದೇಶಕರಿಗೆ ಜಯಚಂದ್ರ ಕ್ಲಾಸ್
ಮಾಜಿ ಸಚಿವ ಟಿ.ಬಿ.ಜಯಚಂದ್ರ ಶನಿವಾರ ಬೆಳಗ್ಗೆ ಗೋಶಾಲೆಗೆ ಭೇಟಿ ನೀಡಿ ಪಶು ಸಂಗೋಪನ ಇಲಾಖೆ ಜಿಲ್ಲಾ ನಿರ್ದೇಶಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ತಕ್ಷಣ ಹಸುಗಳಿಗೆ ನೆರಳು ಒದಗಿಸುವ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರ ರೈತರು ಮಾಜಿ ಸಚಿವರ ಕಾಲಿಗೆ ಬಿದ್ದು ತಮಗೆ ನ್ಯಾಯ ದೊರಕಿಸಿ ಎಂದು ಕೇಳಿಕೊಂಡರು.
ಗುಂಡಿಗೆ ಎಸೆದು ಮಣ್ಣು ಮುಚ್ಚೋದನ್ನೇ ಮರೆತರು!
ಗೋಶಾಲೆಯಲ್ಲಿ ಕನಿಷ್ಠ ಸತ್ತ ಹಸು-ಕರುಗಳನ್ನು ಸರಿಯಾಗಿ ಸಂಸ್ಕಾರ ಮಾಡಲಾಗಿದೆಯೇ ಎಂದರೆ ಮತ್ತೊಂದು ದುರಂತ ಕಣ್ಣಿಗೆ ಕಟ್ಟುತ್ತದೆ. ಸಾವನ್ನು ನಿರೀಕ್ಷಿಸಿರುವಂತೆ ಗೋಶಾಲೆಯ ಅನತಿ ದೂರದಲ್ಲಿ ನಾಲ್ಕಾರು ಗುಂಡಿಗಳನ್ನು ತೆರೆಯಲಾಗಿದೆ. ಅವುಗಳಲ್ಲಿ ಒಂದರಲ್ಲೇ ಹಸುವನ್ನು ಸಂಸ್ಕಾರ ಮಾಡಲಾಗಿದೆಯಂತೆ. ಪಕ್ಕದ ಮತ್ತೊಂದು ಗುಂಡಿಯಲ್ಲಿ 3-4 ಸತ್ತ ಕರುಗಳನ್ನು ಎಸೆದಿದ್ದು, ಮಣ್ಣು ಮುಚ್ಚುವುದನ್ನೇ ಮರೆತಿರುವ ಕಾರಣ ಕರುಗಳು ಕೊಳೆತು ಸುತ್ತಲೂ ದುರ್ವಾಸನೆ ಹರಡಿದೆ. ಮೃತದೇಹಕ್ಕೆ ಲಕ್ಷಾಂತರ ಹುಳುಗಳು ಬಿದ್ದಿರುವುದು ಕಂಡುಬಂದಿದೆ. ಮತ್ತೊಂದು ಕರುವಿನ ದೇಹವನ್ನು ನೆಲದ ಮೇಲೆ ಎಸೆದಿದ್ದು, ನಾಯಿ ನರಿಗಳಿಗೆ ಆಹಾರವಾಗುತ್ತಿದೆ.
ಮಾಧ್ಯಮದವರು ಹಾಗೂ ರೈತ ಸಂಘದವರಿಂದ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ತಾತ್ಕಾಲಿಕ ಶೆಡ್ ನಿರ್ಮಿಸಬೇಕು, ಹಿಂಡಿ, ರಾಗಿ ಹುಲ್ಲು ಹಾಗೂ ಜೋಳದ ತೆನೆಗಳನ್ನು ಕತ್ತರಿಸಿ ರಾಸುಗಳಿಗೆ ನೀಡಬೇಕು, 15 ಗೋಪಾಲಕರನ್ನು ನೇಮಿಸಬೇಕು, ಸತ್ತ ಕರುಗಳನ್ನು ಸೂಕ್ತವಾಗಿ ದಫನ್ ಮಾಡಬೇಕು, ಒಬ್ಬ ಪಶು ವೈದ್ಯರು ಸ್ಥಳದಲ್ಲೇ ಇದ್ದು ರಾಸುಗಳಿಗೆ ಚಿಕಿತ್ಸೆ ನೀಡಬೇಕು. ಔಷಧಿಯ ಕೊರತೆ ಉಂಟಾಗಬಾರದು, ಇನ್ನು ಮುಂದೆ ಏನಾದರೂ ಹಸುಗಳ ಹಾಗೂ ಕರುಗಳ ಸಾವುಂಟಾದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. | ಎಲ್.ಮುರಳಿಧರ್, ತಹಸೀಲ್ದಾರ್ ಶಿರಾ