ಗುಂಡ್ಲುಪೇಟೆ: ತಾಲೂಕಿಗೆ ಸಮರ್ಪಕವಾಗಿ ಮಳೆ ಬೀಳದ ಪರಿಣಾಮ ದಿನೇ ದಿನೆ ತಾಪಮಾನ ಹೆಚ್ಚಾಗುತ್ತಿದ್ದು ಬಂಡೀಪುರದ ವನ್ಯಜೀವಿಗಳೂ ನೀರಿನಲ್ಲಿ ಮುಳುಗಿ ದೇಹವನ್ನು ತಂಪು ಮಾಡಿಕೊಳ್ಳುವಂತಾಗಿದೆ.
ಬಂಡೀಪುರ ಅರಣ್ಯ ಪ್ರದೇಶಕ್ಕೆ ಉತ್ತಮ ಮಳೆ ಬಿದ್ದಿದ್ದರೂ ಕಳೆದ ವಾರದಿಂದ ಮಳೆ ಬೀಳದೆ ಬಿಸಿಲಿನ ತಾಪಮಾನ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಜತೆಗೆ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದೆ. ಇದರಿಂದ ಧಗೆ ಸಹಿಸಲು ಸಾಧ್ಯವಾಗದ ವನ್ಯಜೀವಿಗಳು ದೇಹವನ್ನು ತಂಪು ಮಾಡಿಕೊಳ್ಳಲು ನೀರಿನ ಮೊರೆ ಹೋಗುತ್ತಿವೆ.
ಕಳೆದ ವರ್ಷ ಬಿದ್ದ ಮಳೆಯಿಂದ ಬಂಡೀಪುರದ ಎಲ್ಲ ಕೆರೆಗಳೂ ತುಂಬಿ ಕೋಡಿ ಬಿದ್ದಿದ್ದರಿಂದ ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ಕೊರತೆಯಾಗಿರಲಿಲ್ಲ. ಈ ಬಾರಿಯೂ ಪೂರ್ವ ಮುಂಗಾರು ಮಳೆ ಬಂಡೀಪುರಕ್ಕೆ ಚೆನ್ನಾಗಿ ಬಿದ್ದು ಕೆರೆ-ಕಟ್ಟೆಗಳಿಗೆ ನೀರು ಬರುವ ಜತೆಗೆ ಹುಲ್ಲು ಗರಿಕೆಗಳು, ಮರ-ಗಿಡಗಳು ಹಚ್ಚ ಹಸಿರಿನಿಂದ ಮೈದುಂಬಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಹೆಚ್ಚಾಗಿ ಆನೆಗಳು ಹಾಗೂ ಹುಲಿಗಳು ಕೆರೆಗಳ ನೀರಿನಲ್ಲಿ ಮುಳುಗಿ ಮೈತಂಪು ಮಾಡಿಕೊಳ್ಳುತ್ತಿವೆ.