ಕಂಪ್ಲಿ ತಾಲೂಕಿನ ಹೊನ್ನಳ್ಳಿ ಸಿದ್ದಪ್ಪನವರ ಸಹಿಪ್ರಾಶಾಲೆಗೆ ಡಿಸಿ ಪ್ರಶಾಂತಕುಮಾರ್ ಮಿಶ್ರ ಭೇಟಿ ನೀಡಿ ವಿದ್ಯಾರ್ಥಿ ಪಾಲಕರೊಂದಿಗೆ ಚರ್ಚಿಸಿದರು. ಅಧಿಕಾರಿಗಳಾದ ರಾವುಲ್ ಶರಣಪ್ಪ ಸಂಕನೂರು, ಎಸ್.ಶಿವರಾಜ, ಆರ್.ಕೆ.ಶ್ರೀಕುಮಾರ್, ಶಿವನನಾಯ್ಕ ಇತರರಿದ್ದರು. 
ಜಿಲ್ಲೆ

ಬಿಸಿಯೂಟದಲ್ಲಿ ಪೌಷ್ಟಿಕಾಂಶವಿಲ್ಲ

ಪ್ರವೀಣ ಉದುಸಾ ದಲಬಂಜನ್

ಕಂಪ್ಲಿ: ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿದ್ದ ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸರ್ಕಾರಿ ಶಾಲೆಗೆ ಬುಧವಾರ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.

ಡಿಸಿಗೆ ಪಾಲರು ಆರೋಪಗಳ ಮಳೆಗೈದರು. ಪಾಲಕರಾದ ವದಿಗೇರಿ ರುದ್ರಪ್ಪ, ಪರಶುರಾಮ, ಹುಲೆಪ್ಪ, ಶಾಂತಮ್ಮ ಮೊದಲಾದವರು ಮಾತನಾಡಿ, ನೀವು ಬರ‌್ತಿರಂತ ಅಡುಗೆಕೋಣೆ ಸ್ವಚ್ಛಗೊಳಿಸಿದ್ದಾರೆ. ಬಿಸಿಯೂಟದಲ್ಲಿ ಪೌಷ್ಟಿಕಾಂಶ ಇರುವುದಿಲ್ಲ. ವಾಟರ್‌ಟ್ಯಾಂಕ್‌ನಲ್ಲಿ ಹುಳಗಳಿದ್ದು ಇದೀಗ ಸ್ವಚ್ಛಗೊಳಿಸಿದ್ದಾರೆ. ಅಡುಗೆದಾರರ ನಿರ್ಲಕ್ಷ್ಯದಿಂದ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಬಿಸಿಯೂಟದಲ್ಲಿ ಹಲ್ಲಿ ಸಿಕ್ಕಿರುವುದು ಇದು ಎರಡನೇ ಪ್ರಕರಣವಾಗಿದೆ. ಆರ್.ಓ.ಪ್ಲಾಂಟ್ ವರ್ಕ್ ಆಗ್ತಿಲ್ಲ. ಬಿಸಿಯೂಟದ ಗುಣಮಟ್ಟ ಅರಿಯಲು ಪಾಲಕರನ್ನು ಶಾಲೆಯೊಳಗೆ ಬಿಡುತ್ತಿಲ್ಲ. ಇಸ್ಕಾನ್ ಊಟ ಮಕ್ಕಳಿಗೆ ಕೊಡಿ ಇಲ್ಲವಾದರೆ ಬಿಸಿಯೂಟ ರದ್ದುಗೊಳಿಸಿ ಎಂದು ಒತ್ತಾಯಿಸಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ಎಚ್.ಜಗದೀಶ ಮಾತನಾಡಿ, ಇಸ್ಕಾನ್ ಊಟ ಕೊಡುವತನಕ ಶಾಲೇಲಿ ಬಿಸಿಯೂಟ ತಯಾರಿಬೇಡ. ಪಹಣಿಯಲ್ಲಿ ಶಾಲೆ ಹೆಸರು ಸೇರಿಸಬೇಕು. ರಾಳಗುಡ್ಡದಲ್ಲಿ ಪ್ರೌಢಶಾಲೆಗೆ ನಿವೇಶನ ಕೊಡಬೇಕು, ಶಾಲಾಕೊಠಡಿಗಳ ಕೊರತೆಯಿದ್ದು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.

ಡಿಸಿ ಪ್ರಶಾಂತಕುಮಾರ್ ಮಿಶ್ರಾ ಮಾತನಾಡಿ, ಮಕ್ಕಳು ಆರೋಗ್ಯದಿಂದ ಇದ್ದಾರೆ. ಇದರ ಬಗ್ಗೆ ಪಾಲಕರು ಆತಂಕಪಡಬಾರದು. ಬಿಸಿಯೂಟದಲ್ಲಿ ಹಲ್ಲಿ ಬಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಇಸ್ಕಾನ್ ಊಟಕ್ಕಾಗಿ ಎಸ್.ಡಿ.ಎಂ.ಸಿ ಠರಾವ್ ಪಾಸ್ ಕೊಡಬೇಕು. ಇಸ್ಕಾನ್ ಊಟ ಬರುವತನಕ ಬಿಸಿಯೂಟ ಮುಂದುವರೆಸಲಾಗುವುದು. ಮುಖ್ಯಶಿಕ್ಷಕ, ಎಸ್.ಡಿ.ಎಂ.ಸಿ ಜವಾಬ್ದಾರಿ ತಗೆದುಕೊಂಡು ಶುದ್ಧ ಬಿಸಿಯೂಟ, ಕುಡಿವನೀರು ಪೂರೈಸಬೇಕು. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದ ಕ್ರಮವಹಿಸಬೇಕು. ಶುದ್ಧ ಆಹಾರ ತಯಾರಿಕೆ, ಅಡುಗೆಕೋಣೆ, ನೀರು ತೊಟ್ಟಿ ಸ್ವಚ್ಛತೆ, ಸುರಕ್ಷತಾ ಕ್ರಮ ಕುರಿತು ಎಲ್ಲಾ ಶಾಲೆಗಳಿಗೆ ಸುತ್ತೋಲೆ ಕಳುಹಿಸಲಾಗುವುದು ಎಂದರು.

ಬಿಸಿಯೂಟ ಸಹಾಯಕ ನಿರ್ದೇಶಕ ಶಿವನನಾಯ್ಕ ಮಾತನಾಡಿ, ಮೆಟ್ರಿಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಶಾಲೆ ಸೇರಿ ಕಂಪ್ಲಿ ತಾಲೂಕಿನ 40 ಶಾಲೆಗಳಿಗೆ ಅಡುಗೆಕೋಣೆ ಬದಲಿಗೆ ಇಸ್ಕಾನ್ ಬಿಸಿಯೂಟ ವಿತರಿಸಲು ಎಸ್.ಡಿ.ಎಂ.ಸಿ.ನಡಾವಳಿ ಪತ್ರ, ಮುಖ್ಯಶಿಕ್ಷಕರ ಒಪ್ಪಿಗೆ ಪತ್ರ ಕೊಡುವಂತೆ ತಿಳಿಸಿದೆ ಎಂದರು.

ಕಂಪ್ಲಿ ಸಿಎಚ್‌ಸಿ ಮೇಲ್ವಿಚಾರಣೆ ಅಧಿಕಾರಿ ಜಿ.ಅರುಣ್ ಮಾತನಾಡಿ, ಒಟ್ಟಾರೆ 85 ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಬುಧವಾರ 78 ಮಕ್ಕಳನ್ನು ಡಿಸ್ಜಾರ್ಜ್‌ಮಾಡಲಾಗಿದೆ. ಇನ್ನು ಏಳು ಮಕ್ಕಳಿಗೆ ಹೊಟ್ಟೆನೋವು, ವಾಂತಿ ಲಕ್ಷಣ ಇರುವುದರಿಂದ ಚಿಕಿತ್ಸೆ ಮುಂದುವರೆದಿದೆ ಎಂದರು.

ಜಿಪಂ ಸಿಇಒ ರಾವುಲ್ ಶರಣಪ್ಪ ಸಂಕನೂರು, ತಹಸೀಲ್ದಾರ್ ಎಸ್.ಶಿವರಾಜ, ತಾಪಂ ಇಒ ಆರ್.ಕೆ.ಶ್ರೀಕುಮಾರ್, ಮುಖ್ಯಶಿಕ್ಷಕಿ ನಿರ್ಮಲ, ಗ್ರಾಪಂ.ಉಪಾಧ್ಯಕ್ಷ ನೇಣ್ಕಿ ಗಿರೀಶ, ಸದಸ್ಯ ಎಚ್.ಕುಮಾರಸ್ವಾಮಿ, ಪಿಡಿಒ ಶ್ರೀಶೈಲರೂಗಿ ಸೇರಿ ಇತರರಿದ್ದರು.