ಜೇವರ್ಗಿ: ಗಂವ್ಹಾರ ಹತ್ತಿರದ ಮಾರಡಗಿ(ಎಸ್‌ಎ) ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ ೬೮ ಮಕ್ಕಳನ್ನು ಗಂವ್ಹಾರ ಹಾಗೂ ಜೇವರ್ಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
೧ರಿಂದ ೫ನೇ ತರಗತಿವರೆಗಿನ ಮಾರಡಗಿ ಶಾಲೆಯಲ್ಲಿ ೧೧೬ ಮಕ್ಕಳ ದಾಖಲಾತಿ ಇದ್ದು, ಮಂಗಳವಾರ ೬೮ ಮಕ್ಕಳು ಶಾಲೆಗೆ ಬಂದಿದ್ದರು. ಮಧ್ಯಾಹ್ನ ಅನ್ನ-ಸಾಂಬಾರ ಬಿಸಿಯೂಟ ಮಾಡಿದ ಮಕ್ಕಳಿಗೆ ಏಕಾಏಕಿ ವಾಂತಿ ಶುರುವಾಗಿದೆ. ಕೂಡಲೇ ಶಿಕ್ಷಕರು ೪೦-೫೦ ಅಸ್ವಸ್ಥರನ್ನು ಗಂವ್ಹಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ಉಳಿದವರನ್ನು ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಬಿಸಿಯೂಟ ವಿಷಾಹಾರವಾಗಲು ಕಲುಷಿತ ನೀರು, ದುರ್ವಾಸನೆ ಬೀರುವ ಖಾರದ ಪುಡಿ ಕಾರಣ ಎಂದು ಮಕ್ಕಳ ಪಾಲಕರು ಆರೋಪಿಸಿದ್ದಾರೆ.
ಸುದ್ಧಿ ತಿಳಿಯುತ್ತಿದ್ದಂತೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಸವರಾಜ ಪಾಟೀಲ್ ನರಿಬೋಳ ಆಸ್ಪತ್ರೆಗೆ ಧಾವಿಸಿ ಮಕ್ಕಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ, ಬಿಸಿಯೂಟ ವಿಷಾಹಾರ ಆಗಿರುವ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಅಸ್ವಸ್ಥರ ಚಿಕಿತ್ಸೆಗೆ ಸ್ಪಂದಿಸಿದ ಶಾಸಕ: ಮಾರಡಗಿ(ಎಸ್‌ಎ) ಸರ್ಕಾರಿ ಹಿರಿಯ ಶಾಲೆಯಲ್ಲಿ ಬಿಸಿಊಟ ಸೇವಿಸಿ ಮಕ್ಕಳು ಅಸ್ವಸ್ಥಗೊಂಡ ಸುದ್ದಿ ತಿಳಿಯುತ್ತಲೇ ಶಾಸಕ ಡಾ.ಅಜಯಸಿಂಗ್ ಆಪ್ತ ಸಹಾಯಕರು, ಸಿಬ್ಬಂದಿ ತಂಡ ರಚಿಸಿ ಧರ್ಮಸಿಂಗ್ ಫೌಂಡೇಷನ್ ಆಂಬುಲೆನ್ಸ್ ಮೂಲಕ ಚಿಕಿತ್ಸೆ ದೊರೆಯುವಂತೆ ಮಾಡಿದ್ದಾರೆ. ಇಡೀ ಪ್ರಕರಣದ ಮೇಲೆ ನಿಗಾ ಇರಿಸಿರುವ ಶಾಸಕ ಅಜಯಸಿಂಗ್ ಪ್ರತಿ ಹಂತದಲ್ಲಿ ಸಮನ್ವಯ ಸಾಧಿಸಿ ಚಿಕಿತ್ಸೆ ಕೊಡಿಸಿದರು. ತೀವ್ರ ಅಸ್ವಸ್ಥ ರೇಖಾ ಮತ್ತು ಅಂಬರೀಶ್ ಅವರನ್ನು ಐಸಿಯುನಲ್ಲಿರಿಸಿ ನಿಗಾ ಇಟ್ಟಿದ್ದು, ಆರೋಗ್ಯ ಸ್ಥಿರವಾಗಿದೆ. ಅಸ್ವಸ್ಥ ಮಕ್ಕಳ ಪಾಲಕರ ಜತೆ ಕರೆ ಮಾಡಿ ಧೈರ್ಯ ತುಂಬಿದ ಡಾ.ಅಜಯಸಿಂಗ್, ಜಿಲ್ಲಾ ಆರೋಗ್ಯಾಧಿಕಾರಿ, ಜೇವರ್ಗಿ ಬಿಇಒ, ಟಿಎಚ್‌ಒ, ಡಿವೈಎಸ್ಪಿ ಹಂತದ ಅಧಿಕಾರಿಗಳ ಜತೆ ಮಾತಾಡಿ ನಿರಂತರ ನಿಗಾ ಇಡುವುದರ ಜತೆಗೆ ಅಸ್ವಸ್ಥತೆ ಕಾರಣ ಪತ್ತೆ ಹಚ್ಚಲು ಸೂಚಿಸಿದ್ದಾರೆ. ಗಂವ್ಹಾರ, ಜೇವರ್ಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಪಾಲಕರಿಗೆ ರಾತ್ರಿ ಉಟೋಪಚಾರದ ವ್ಯವಸ್ಥೆಯನ್ನು ಫೌಂಡೇಷನ್‌ನಿಂದ ಮಾಡಲಾಗಿದೆ.