ಜಿಲ್ಲೆ

ಬಿಸಿಯೂಟ ಯೋಜನೆ ಮಕ್ಕಳ ಬೆಳವಣಿಗೆಗೆ ಸಹಕಾರಿ

ಹರಿಹರ: ಬಿಸಿಯೂಟ ಯೋಜನೆಯಿಂದ ವಿದ್ಯಾರ್ಥಿಗಳು ದೈಹಿಕವಾಗಿ ಸದೃಢರಾಗಲು ಸಾಧ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹನುಮಂತಪ್ಪ ಹೇಳಿದರು.
ಗುತ್ತೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಬಿಸಿಯೂಟದೊಂದಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾಚಿಕ್ಕಿ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
ಪೌಷ್ಟಿಕತೆ ಕೊರತೆ ಇರುವ ಮಕ್ಕಳು ಶೈಕ್ಷಣಿಕವಾಗಿಯೂ ಹಿಂದುಳಿಯುತ್ತಿದ್ದರು. ಇದನ್ನು ಮನಗಂಡು ಸರ್ಕಾರ ಜಾರಿ ಮಾಡಿರುವ ಬಿಸಿಯೂಟ ಯೋಜನೆ ಹಾಗೂ ಮೊಟ್ಟೆ, ಬಾಳೆಹಣ್ಣು, ಶೇಂಗಾಚಿಕ್ಕಿ ವಿತರಣೆ ಸೂಕ್ತವಾಗಿದೆ ಎಂದರು.
ಬಡತನದ ಕಾರಣದಿಂದ ಮಕ್ಕಳು ಶಾಲೆಯಲ್ಲಿ ಹಸಿವಿನಿಂದ ಬಳಲಬಾರದು ಎಂಬ ಕಾರಣದಿಂದ ಈ ಹಿಂದೆ ಗೋದಿ, ಮೆಕ್ಕೆಜೋಳದ ಉಪ್ಪಿಟ್ಟು ವಿತರಣೆ ಮಾಡಲಾಗುತ್ತಿತ್ತು. ಆ ಕಲ್ಪನೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಪೂರ್ಣ ಪ್ರಮಾಣದ ಊಟವನ್ನೇ ಈಗ ಬಡಿಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತ ಐರಣಿ ಹನುಮಂತಪ್ಪ ಮಾತನಾಡಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸರ್ಕಾರ ಬಿಸಿಯೂಟದ ಜತೆ ಹೆಚ್ಚುವರಿ ಪದಾರ್ಥಗಳನ್ನು ನೀಡುತ್ತಿದೆ. ಈ ಯೋಜನೆ ಸಮಾಜ ಮುಖಿಯಾಗಿದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಜೆ.ನಾಗರಾಜ್ ಮಾತನಾಡಿದರು. ಬಿಇಒ ಕಚೇರಿ ಇಸಿಒ ಹರೀಶ್ ನೋಟಗಾರ್, ಮುಖ್ಯ ಶಿಕ್ಷಕ ಟಿ.ಸಿದ್ದಪ್ಪ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಜಿ.ಎಸ್.ವೀರಭದ್ರಪ್ಪ, ಶಿಕ್ಷಕರಾದ ಶ್ರೀಧರ್ ಮಯ್ಯ, ನಾಗರಾಜ್ ಪಿ.ಭಾನುವಳ್ಳಿ, ವಿ.ಎಸ್.ನಾಗರಾಜ್, ರೀನಾ, ಸುನಂದಾ, ಸೌಭಾಗ್ಯ, ಅನಿತಾ, ಸರಸ್ವತಿ, ಆರುಂಧತಿ ಇದ್ದರು.