ಜಿಲ್ಲೆ

ಬಿಸಿಎಂ ಹಾಸ್ಟೆಲ್‌ಗಳಲ್ಲಿ ಹಣ ದುರುಪಯೋಗ

ಕೆ.ಆರ್.ಪೇಟೆ: ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಬಾಲಕ ಮತ್ತು ಬಾಲಕಿಯರ ಹಾಸ್ಟೆಲ್‌ಗಳಲ್ಲಿ ಕಡಿಮೆ ವಿದ್ಯಾರ್ಥಿಗಳು ಹಾಜರಾಗುತ್ತಿದ್ದರೂ ಎಲ್ಲ ವಿದ್ಯಾರ್ಥಿಗಳಿಗೂ ಹಾಜರಾತಿ ಹಾಕಿ ಪ್ರತಿ ವಿದ್ಯಾರ್ಥಿಗೆ ಸರ್ಕಾರ ನೀಡುವ ಮಾಸಿಕ 1700 ರೂ.ಗಳಂತೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿಯನ್ನು ವಾರ್ಡನ್ ಹಾಗೂ ಅಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದಲಿತ ಮುಖಂಡ ಹಾಗೂ ತಾಲೂಕು ದರಖಾಸ್ತು ಕಮಿಟಿ ಸದಸ್ಯ ಬಸ್ತಿ ರಂಗಪ್ಪ ಆರೋಪಿಸಿದರು.

ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಬರೆದಿರುವ ಪತ್ರವನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿ ಮಾತನಾಡಿದರು.

ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 7 ಮೆಟ್ರಿಕ್ ಪೂರ್ವ ಮತ್ತು ಎರಡು ಮೆಟ್ರಿಕ್ ನಂತರದ ಹಾಸ್ಟೆಲ್‌ಗಳು ಸೇರಿ ಒಟ್ಟು 12 ಹಾಸ್ಟೆಲ್‌ಗಳಿಗೆ ಅವುಗಳ ನಿರ್ವಹಣೆಗೆ ಕೇವಲ ಮೂವರು ವಾರ್ಡನ್‌ಗಳನ್ನು ಇದ್ದಾರೆ. ಒಬ್ಬ ವಾರ್ಡನ್ 4ಹಾಸ್ಟೆಲ್‌ಗಳ ಜವಾಬ್ದಾರಿಯಂತೆ ಮೂವರಿಗೆ 12 ವಿದ್ಯಾರ್ಥಿ ನಿಯಲಗಳ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿಲ್ಲ, ಮಕ್ಕಳ ಸುರಕ್ಷತೆ ಇಲ್ಲದಂತಾಗಿದೆ. ಮಕ್ಕಳಿಗೆ ಅತ್ಯಗತ್ಯವಾಗಿ ನೀಡಬೇಕಾದ ಯಾವುದೇ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ. ಸ್ನಾನಕ್ಕೆ ಬಿಸಿ ನೀರು ನೀಡುತ್ತಿಲ್ಲ, ಶೌಚಗೃಹ ವ್ಯವಸ್ಥೆ ಸರಿಯಾಗಿಲ್ಲ. ರಜಾ ದಿನಗಳಲ್ಲಿ ಮಕ್ಕಳನ್ನು ಬಲವಂತವಾಗಿ ಮನೆಗೆ ಹೋಗುವಂತೆ ಒತ್ತಡ ಹೇರಲಾಗುತ್ತಿದೆ. ಕಡಿಮೆ ಮಕ್ಕಳು ವಿದ್ಯಾರ್ಥಿ ನಿಲಯದಲ್ಲಿ ಹಾಜರಿದ್ದರೂ ಎಲ್ಲ ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ ಎಂದು ಹಾಜರಾತಿ ಪುಸ್ತಕದಲ್ಲಿ ದಾಖಲಿಸಿಕೊಂಡು ಸುಳ್ಳು ದಾಖಲೆ ಸೃಷ್ಟಿಸುತ್ತಿದ್ದಾರೆ. ಇದರಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಪರಸ್ಪರ ಶಾಮೀಲಾಗಿ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಒಬ್ಬ ವಾರ್ಡನ್‌ಗೆ 4 ಹಾಸ್ಟೆಲ್ ಜವಾಬ್ದಾರಿ ಕೊಟ್ಟು ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳೇ ವಾಸವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಹಲವಾರು ಬಾರಿ ತಾಲೂಕು ಸಹಾಯಕ ನಿರ್ದೇಶಕರಿಗೆ ಮತ್ತು ಜಿಲ್ಲಾ ಉಪ ನಿರ್ದೇಶಕರಿಗೆ ಮೌಖಿಕವಾಗಿ ಮತ್ತು ದೂರವಾಣಿ ಮೂಲಕ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ತಿಳಿಸಿದ್ದೇನೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಒಬ್ಬರೇ ವಾರ್ಡನ್ ಹಲವು ಹಾಸ್ಟೆಲ್‌ಗಳನ್ನು ನಿರ್ವಹಣೆ ಮಾಡುತ್ತಿರುವ ಕಾರಣ ಹಾಸ್ಟೆಲ್‌ಗಳಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷೆಯೇ ಇಲ್ಲದಂತಾಗಿದೆ. ಇದರಿಂದಾಗಿ ಕೆ.ಆರ್.ಪೇಟೆ ಪಟ್ಟಣದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ಗಳಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದ ಕಾರಣ, ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಗಿಂಕ ದೌರ್ಜನ್ಯ ನಡೆದಿದೆ. ಈ ಇಬ್ಬರು ಹೆಣ್ಣು ಮಕ್ಕಳ ಸ್ಥಿತಿ ಈಗ ಶೋಚನೀಯ ಸ್ಥಿತಿಯಲ್ಲಿದೆ. ಇದಕ್ಕೆಲ್ಲ ಕಾರಣ ಒಬ್ಬರೇ ವಾರ್ಡನ್ ಹಲವು ಹಾಸ್ಟೆಲ್‌ಗಳನ್ನು ನಿರ್ವಹಣೆಯ ಹೊಣೆ ತೆಗೆದುಕೊಂಡಿರುವುದು ಕಾರಣವಾಗಿದೆ. ಹಾಗಾಗಿ ಹಾಸ್ಟೆಲ್‌ಗಳಲ್ಲಿ ಮಕ್ಕಳ ಸುಳ್ಳು ಹಾಜರಾತಿ ಹೆಸರಿನಲ್ಲಿ ಲೂಟಿ ಮಾಡುತ್ತಿರುವ ಹಣವನ್ನು ಉಳಿಸಬೇಕು. ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಚಿವರನ್ನು ಬಸ್ತಿ ರಂಗಪ್ಪ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಕಿಕ್ಕೇರಿ ರಾಜಣ್ಣ, ಛಲವಾದಿ ಮಹಾಸಭಾ ಮಾಜಿ ಅಧ್ಯಕ್ಷ ಮುದುಗೆರೆ ಮಹೇಂದ್ರ, ತಾಲೂಕು ಉಪಾಧ್ಯಕ್ಷ ಬಂಡಿಹೊಳೆ ಕೃಷ್ಣಮೂರ್ತಿ, ಎಂ.ಕೆ.ರಾಜಶೇಖರ್, ಚಿಕ್ಕಗಾಡಿಗನಹಳ್ಳಿ ಸೋಮಶೇಖರ್, ವಿವೇಕ್, ಪವಿಕುಮಾರ್, ಬಂಡಿಹೊಳೆ ರಮೇಶ್, ಹರಿಹರಪುರ ರಂಗರಾಮು, ಶಾಂತಮ್ಮ, ಪದ್ಮಾವತಿ ಮತ್ತಿತರರು ಹಾಜರಿದ್ದರು.