ಜಿಲ್ಲೆ

ಬಿಸಿಎಂ ಹಾಸ್ಟೆಲ್ ಗುಣಮಟ್ಟ ಆಹಾರ ನೀಡಿ

ಮೈಸೂರು: ಕುವೆಂಪುನಗರದಲ್ಲಿರುವ ಬಿಸಿಎಂ ಹಾಸ್ಟೆಲ್‌ಗೆ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಕೆ.ಎ.ದಯಾನಂದ ಮಂಗಳವಾರ ಭೇಟಿ ನೀಡಿ ಪರಿಶೀಲಿದರು.

ಅಲ್ಲಿರುವ ಉಗ್ರಾಣ, ಅಡುಗೆ ಮನೆ, ಕೊಠಡಿಗಳು ಶೌಚಗೃಹಗಳನ್ನು ಪರಿಶೀಲಿಸಿ ಹಾಸ್ಟೆಲ್‌ನಲ್ಲಿಯೇ ಊಟ ಮಾಡಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ರಾಜ್ಯದಲ್ಲಿ ಹೊಸದಾಗಿ 150 ಹಾಸ್ಟೆಲ್‌ಗಳನ್ನು ಮಂಜೂರು ಮಾಡುವುದರೊಂದಿಗೆ ತವರು ಜಿಲ್ಲೆಗೆ 14 ಹಾಸ್ಟೆಲ್‌ಗಳನ್ನು ಮಂಜೂರು ಮಾಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು.

ನಿಲಯಪಾಲಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುವುದರೊಂದಿಗೆ ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದ ರೈತರ ಮಕ್ಕಳು ಹಾಸ್ಟೆಲ್‌ಗಳಿಗೆ ಹೆಚ್ಚಾಗಿ ಬರುವುದರಿಂದ ಓದಲು ತೊಂದರೆ ಆಗದಂತೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿಕೊಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸಬೇಕು ಎಂದರು.

ಪಾಲಿಕೆಯ ಉಪ ಆಯುಕ್ತ ಜಿ.ಎಸ್.ಸೋಮಶೇಖರ್, ಬಿಸಿಎಂ ಜಿಲ್ಲಾ ಅಧಿಕಾರಿ ರಾಘವೇಂದ್ರ, ತಾಲೂಕು ಕಲ್ಯಾಣಾಧಿಕಾರಿ ಚಂದ್ರಕಲಾ, ನಿಲಯ ಪಾಲಕರಾದ ಜಗದೀಶ್, ನಾಗರಾಜ್, ಬೀರೇಗೌಡ ಇದ್ದರು.