ಜಿಲ್ಲೆ

ಬಿಸಿಎಂ ಇಲಾಖೆ ಅವ್ಯವಹಾರ ಬಯಲು ! ; ಪಾವಗಡದಲ್ಲಿ ಮಕ್ಕಳಿಗೆ ಹುಳುಬಿದ್ದ ಆಹಾರ ಪದಾರ್ಥವಿತರಣೆ ; ವಾರ್ಡನ್‌ಗಳಿಗೂ ವಸೂಲಿಕೋರರ ಕಾಟ

ಪಾವಗಡ : ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳಿಗೆ ನೀಡುತ್ತಿರುವ ಆಹಾರ ಪದಾರ್ಥ ಕಳಪೆಯಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಶುಕ್ರವಾರ ತಹಸೀಲ್ದಾರ್ ನಾಗರಾಜ್ ಪಟ್ಟಣದ ವಸತಿನಿಲಯಗಳಲ್ಲಿ ಪರಿಶೀಲನೆ ನಡೆಸಿದರು.

ಬಿಸಿಎಂ ಇಲಾಖೆ ತಾಲೂಕು ವೇದಮೂರ್ತಿ ಹಾಗೂ ಕಚೇರಿ ಸಿಬ್ಬಂದಿಯೇ ಶಾಮೀಲಾಗಿ ಹುಳಬಿದ್ದ ಆಹಾರ ಪದಾರ್ಥಗಳನ್ನು ಮರಿದಾಸನಹಳ್ಳಿ, ಕಿಲಾರ್ಲಹಳ್ಳಿ, ಸಾಸಲಕುಂಟೆ, ರಂಗಸಮುದ್ರ, ಪಾವಗಡ ಹಾಸ್ಟೆಲ್‌ಗಳಿಗೆ ಪೂರೈಕೆ ಮಾಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ತಹಸೀಲ್ದಾರ್, ಆಹಾರ ನಿರೀಕ್ಷಕ ಮಂಜುನಾಥ್, ನಾಗೇಂದ್ರ ತಂಡ ದಾಳಿ ನಡೆಸಿತು.

ತಹಸೀಲ್ದಾರ್ ಭೇಟಿ ಸಂದರ್ಭದಲ್ಲಿಯೂ ಬಿಎಸ್‌ಎನ್‌ಎಲ್ ಕಚೇರಿ ಸಮೀಪದ ವಸತಿನಿಲಯಗಳಲ್ಲಿದ್ದ ಆಹಾರ ಪದಾರ್ಥ ಕಳಪೆಯಾಗಿದ್ದು ಪತ್ತೆಯಾಯಿತು, ಗುರುಭವನದ ಪಕ್ಕದಲ್ಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ, ಪತಂಜಲಿ ನಗರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿನಿಲಯ, ಬನಶಂಕರಿಯಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯಗಳಲ್ಲಿಯೂ ಇದೇ ಪರಿಸ್ಥಿತಿ ಇತ್ತು.

ಬಿಸಿಎಂ ಸಿಬ್ಬಂದಿ ಶಾಮೀಲು! : ತಾಲೂಕಿನಲ್ಲಿ 13 ವಸತಿ ನಿಲಯಗಳಿದ್ದು, ನಿಲಯಪಾಲಕ ಹುದ್ದೆಗಳು ಖಾಲಿ ಇರುವ ಹಿನ್ನೆಲೆಯಲ್ಲಿ ತಾಲೂಕು ಬಿಸಿಎಂ ಅಧಿಕಾರಿ ವೇದಮೂರ್ತಿ ಖುದ್ದು 5 ವಸತಿನಿಲಯಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎನ್ನಲಾಗಿದೆ. ತಾಲೂಕು ಅಧಿಕಾರಿ ಹೆಸರಿನಲ್ಲಿ ಬಿಸಿಎಂ ಕಚೇರಿ ಸಿಬ್ಬಂದಿ ಕೂಡ ಹಾಸ್ಟೆಲ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಬಗ್ಗೆ ದೂರುಗಳಿವೆ.

ಹುಳು ಬಿದ್ದಿರುವ ಆಹಾರ ಪದಾರ್ಥ ತಿನ್ನಲು ಯೋಗ್ಯವಾಗಿಲ್ಲ, ಕನಿಷ್ಠ 6 ತಿಂಗಳ ಹಿಂದೆಯೇ ದಾಸ್ತಾನು ಮಾಡಲಾದ ಪದಾರ್ಥವಾಗಿದೆ ಎಂದು ತಂಡದಲ್ಲಿದ್ದ ಆಹಾರ ನಿರೀಕ್ಷಕರಾದ ಮಂಜುನಾಥ್ ಹಾಗೂ ನಾಗೇಂದ್ರ ಖಚಿತಪಡಿಸಿದ್ದಾರೆ. ಮಕ್ಕಳಿಗೆ ನೀಡುವ ಆಹಾರದಲ್ಲಿ ವ್ಯತ್ಯಾಸವಾದ ದೂರುಗಳು ಬಂದರೆ ಕ್ರಮಕೈಗೊಳ್ಳಲಾಗುವುದು ಎಂದು ಬಿಸಿಎಂ ಜಿಲ್ಲಾ ಅಧಿಕಾರಿ ಎನ್.ತ್ಯಾಗರಾಜು ತಿಳಿಸಿದ್ದಾರೆ.

ಲಾಕ್‌ಡೌನ್‌ನಲ್ಲಿ ಉಳಿದಿದ್ದ ಆಹಾರ ಪದಾರ್ಥ!? : ಕರೊನಾ ಮೊದಲ ಅಲೆ ವೇಳೆ ಹಾಸ್ಟೆಲ್‌ಗಳನ್ನು ಮುಚ್ಚಿದಾಗ ಆಹಾರ ಪದಾರ್ಥ ಹಾಳಾಗಿದೆ ಎಂದು ಜಿಲ್ಲಾಡಳಿತದಿಂದ ಛೀಮಾರಿ ಹಾಕಿಸಿಕೊಂಡಿದ್ದ ಬಿಸಿಎಂ ಇಲಾಖೆ, ಈಗ ಮತ್ತೆ ಅದೇ ಕೆಟ್ಟ ಆಹಾರ ಪದಾರ್ಥವನ್ನು ವಿದ್ಯಾರ್ಥಿಗಳಿಗೆ ಸರಬರಾಜು ಮಾಡಿದೆ ಎಂದು ಅನುಮಾನಿಸಲಾಗಿದೆ.

ತಾಲೂಕಿನಲ್ಲಿ ಶುಕ್ರವಾರ ಹಾಸ್ಟೆಲ್‌ಗಳಲ್ಲಿ ಪತ್ತೆಯಾದ ಕಳಪೆ ಆಹಾರ ಪದಾರ್ಥದ ಹಿಂದೆ ತಾಲೂಕು ಬಿಸಿಎಂ ಇಲಾಖೆ ಸಿಬ್ಬಂದಿ ಕೈಚಳಕವಿದೆ ಎನ್ನಲಾಗಿದ್ದು, ನಿಲಯಪಾಲಕರು ಶಾಮೀಲಾಗಿರುವ ಶಂಕೆಯಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆದರಷ್ಟೇ ಸತ್ಯಹೊರಬೀಳಲಿದೆ.

ಲೂಟಿಕೋರರ ಭಯದಲ್ಲಿ ವಾರ್ಡನ್‌ಗಳು! : ಪಾವಗಡ ತಾಲೂಕಿನಲ್ಲಿರುವ ವಿದ್ಯಾರ್ಥಿನಿಲಯ ಹಾಗೂ ವಸತಿ ನಿಲಯಗಳಲ್ಲಿ ವಸೂಲಿಕೋರರ ಹಾವಳಿ ವಿಪರೀತವಾಗಿದೆ ಎಂಬ ದೂರುಗಳಿವೆ. ಸಂಘ, ಸಂಸ್ಥೆ ಹಾಗೂ ಕೆಲವು ಪತ್ರಿಕೆಗಳ ಹೆಸರಿನಲ್ಲಿ ಮಾಸಿಕವಾಗಿಯೂ ವಸೂಲಿ ಮಾಡಲಾಗುತ್ತಿರುವುದು ವಾರ್ಡನ್‌ಗಳು ಅಡ್ಡದಾರಿ ಹಿಡಿಯಲು ಕಾರಣ ಎನ್ನಲಾಗಿದೆ. ಇಂತಹ ವಸೂಲಿಕೋರರಿಗಾಗಿಯೇ ಹಾಸ್ಟೆಲ್‌ಗಳಲ್ಲಿ ಸಹಾಯಕ ಸಿಬ್ಬಂದಿ ಹೆಸರಿನಲ್ಲಿ ಬೇನಾಮಿ ವೇತನ ಸೃಷ್ಟಿಸಿ ಪ್ರತಿತಿಂಗಳು ನೀಡಲಾಗುತ್ತಿದೆ ಎನ್ನಲಾಗಿದೆ. ಸರ್ಕಾರ ನೀಡುವ ಹಣದಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಲು ಸಾಧ್ಯವಿದೆ ಆದರೆ, ಈ ವಸೂಲಿಕೋರರನ್ನು ಸಾಕಲು ಸರ್ಕಾರ ಮತ್ತಷ್ಟು ಅನುದಾನ ನೀಡಿದರೂ ಸಾಕಾಗುತ್ತಿಲ್ಲ, ಇದೇ ಕಾರಣಕ್ಕೆ ಪಾವಗಡದಲ್ಲಿ ಕೆಲಸ ಮಾಡಲು ವಾರ್ಡನ್‌ಗಳು ಹಿಂದೇಟು ಹಾಕುತ್ತಾರೆ ಎಂದು ಹೆಸರು ಹೇಳಲಿಚ್ಚಿಸದ ನಿಲಯಪಾಲಕರೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು.

ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು ಕಳಪೆ ಆಹಾರ ಪದಾರ್ಥ ಪತ್ತೆಯಾಗಿದೆ. ಈ ಬಗ್ಗೆ ಸ್ಪಷ್ಟೀಕರಣಕ್ಕಾಗಿ ತಾಲೂಕು ಬಿಸಿಎಂ ಅಧಿಕಾರಿ ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅಕ್ರಮದ ವಿರುದ್ಧ ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು. ಕೆ.ಆರ್.ನಾಗರಾಜ್ ತಹಸೀಲ್ದಾರ್