ಬಾಗಲಕೋಟೆ ನಗರದ ಬಿವಿವಿ ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ ವತಿಯಿಂದ ಗುರುವಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಹಬ್ಬದ ದೃಶ್ಯ. 
ಜಿಲ್ಲೆ

ಬಿವಿವಿ ಸಂಘದ ಆವರಣದಲ್ಲಿ ಕನ್ನಡ ಕಲರವ

ಬಾಗಲಕೋಟೆ: ಕಣ್ಣು ಹಾಡಿಸದಲೆಲ್ಲ ಹಳದಿ, ಕೆಂಪು ಬಾವುಟ..ಪ್ರತಿಯೊಬ್ಬರ ಬಾಯಿಯಲ್ಲೂ ಕನ್ನಡ ಕಂಪನ…ಅಕ್ಷರಶಃ ಕನ್ನಡ ಲೋಕವೇ ಸೃಷ್ಟಿಯಾಗಿತ್ತು…!!

ನಗರದ ಬಿವಿವಿ ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ ವತಿಯಿಂದ ಗುರುವಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಹಬ್ಬದ ದೃಶ್ಯಗಳಿವು. ಎಲ್ಲೆಡೆ ಕನ್ನಡದ ಕಲರವ ಮೇಳೈಸುವಂತೆ ಮಾಡಿತು.

ಮಹಾವಿದ್ಯಾಲಯ ಹೂವಿನ ಅಲಂಕಾರದಿಂದ ಶೃಂಗರಿಸಿ, ಮಹಾವಿದ್ಯಾಲಯ ಆವರಣದಲ್ಲಿ ಕನ್ನಡತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ, ಇಮ್ಮಡಿ ಪುಲಕೇಶಿ ಹಾಗೂ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪ್ರಾಚಾರ್ಯ ಡಾ.ಎಸ್.ಎಂ ಗಾಂವಕರ ಪುಷ್ಪ ಅರ್ಪಿಸಲಾಯಿತು.

ಮಹಾವಿದ್ಯಾಲಯದಿಂದ ಪ್ರಾರಂಭವಾಗಿ ಕನ್ನಡ ಹಬ್ಬದ ಮೆರವಣಿಗೆ ಬಿವಿವಿ ಸಂಘದ ಮೈದಾನದ ವಿವಿಧೆಡೆ ಸಂಚರಿಸಿತು. ಪಾರ್ಮಸಿ ಕಾಲೇಜು, ವಾಣಿಜ್ಯ ಮಹಾವಿದ್ಯಾಲಯ, ಕಲಾ ಮಹಾವಿದ್ಯಾಲಯದ ಎದುರು ಸಾಗಿ ಮರಳಿ ವಿಜ್ಞಾನ ಮಹಾವಿದ್ಯಾಲಯ ತಲುಪಿತು.

ಕನ್ನಡತಾಯಿ ಭುವನೇಶ್ವರಿ ಹಾಗೂ ಇಮ್ಮಡಿ ಪುಲಕೇಶಿ ಭಾವಚಿತ್ರಗಳ ಮೆರವಣಿಗೆ ಅದ್ದೂರಿಯಾಗಿ ನಡೆದ ಮೆರವಣಿಗೆಯಲ್ಲಿ ವಿವಿಧ ದೇಶಿ ಉಡುಪು ತೊಟ್ಟ ವಿದ್ಯಾರ್ಥಿಗಳು ಮೆರವಣಿಗೆ ಉದ್ದೂಕ್ಕೂ ಕನ್ನಡ ನಾಡನುಡಿ ಹಾಡುಗಳಿಗೆ ನೃತ್ಯ ಮಾಡಿದರು. ಜಾನಪದ ಕಲಾತಂಡಗಳು ಕನ್ನಡ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಿತ್ತು. ಮೆರವಣಿಗೆಯಲ್ಲಿ ಮಹಾವಿದ್ಯಾಲಯದ ಶಿಕ್ಷಕ ವರ್ಗ ಹಾಗೂ ಸಿಬ್ಬಂದಿ, ಬಿ.ಎಸ್ಸಿ.ಹಾಗೂ ಬಿಸಿಎ ಅಂತಿಮ ವರ್ಷದ ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.