ಜಿಲ್ಲೆ

ಬಿಳಿಸುಳಿ ರೋಗ ನಿಯಂತ್ರಣಕ್ಕೆ 15 ದಿನಗಳಲ್ಲಿ ವಿಸ್ತೃತ ವರದಿ; ಸಂಸದ ಶ್ರೇಯಸ್ ಪಟೇಲ್ ಮಾಹಿತಿ

ಹಾಸನ: ಮೆಕ್ಕೆ ಜೋಳದ ಬಿಳಿಸುಳಿ ರೋಗ ನಿಯಂತ್ರಿಸಲು ಅಧ್ಯಯನಕ್ಕೆ ತಜ್ಞರ ತಂಡ ಜಿಲ್ಲೆಯ ವಿವಿಧ ಆಯ್ದ ಪ್ರದೇಶಗಳಿಗೆ ಭೇಟಿ ನೀಡಿ ಮಣ್ಣಿನ ಮಾದರಿ, ಬಿತ್ತನೆ ಬೀಜ ಇತ್ಯಾದಿಗಳ ಮಾದರಿಯನ್ನು ತೆಗೆಕೊಂಡಿದೆ. ಇವುಗಳನ್ನು ಪರೀಕ್ಷೆಗೆ ಒಳಪಡಿಸಿ 15 ದಿನಗಳಲ್ಲಿ ವಿಸ್ತೃತ ವರದಿ ನೀಡಲಿದ್ದಾರೆ ಎಂದು ಸಂಸದ ಶ್ರೇಯಸ್ ಎಂ ಪಟೇಲ್ ತಿಳಿಸಿದ್ದಾರೆ.

ಬಿಳಿಸುಳಿ ರೋಗ ವೀಕ್ಷಣೆಗೆ ಕೇಂದ್ರದ ವಿಜ್ಞಾನಿಗಳ ತಂಡ ಜಿಲ್ಲೆಗೆ ಆಗಮಿಸಿ ಆಲೂರು, ಹೊಳೆನರಸೀಪುರ, ಅರಕಲಗೂಡು, ಬೇಲೂರು ತಾಲೂಕುಗಳಲ್ಲಿ ಆಯ್ದ ಭಾಗಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿರುವ ತಂಡದೊಂದಿಗೆ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಜೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಳಿಸುಳಿ ರೋಗ ನಿಯಂತ್ರಿಸಲು ಅಧ್ಯಯನಕ್ಕಾಗಿ ತಜ್ಞರ ತಂಡವನ್ನು ಜಿಲ್ಲೆಗೆ ಕಳುಹಿಸಿಕೊಡುವಂತೆ ಕೇಂದ್ರ ಕೃಷಿ ಸಚಿವರಲ್ಲಿ ಮನವಿ ಮಾಡಿಲಾಗಿತ್ತು. ಅದರಂತೆ ತಜ್ಞರ ತಂಡ ಜಿಲ್ಲೆಯ ವಿವಿಧ ಆಯ್ದ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದೆ ಎಂದರು.

ಬಿಳಿಸುಳಿ ರೋಗ ನಿಯಂತ್ರಿಸಲು ತಜ್ಞರ ತಂಡ ವರದಿಯನ್ನು ಸಲ್ಲಿಸಿದ ನಂತರ ಕೇಂದ್ರ ಸಚಿವರನ್ನು ಭೇಟಿ ಮಾಡಿ ಅನುಸರಿಸಬೇಕಾದ ಸೂಕ್ತ ಕ್ರಮಗಳ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಸಮನ್ವಯತೆಯನ್ನು ನಡೆಸಿ ವರದಿಯಲ್ಲಿ ನೀಡುವ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಜ್ಞರು ಹೇಳುವ ಪ್ರಕಾರ ಒಂದೇ ಭೂಮಿಯಲ್ಲಿ ಒಂದೇ ಬೆಳೆ ಪುನರಾವರ್ತನೆ ಬಿತ್ತನೆ ಮಾಡುವುದು ರೋಗಕ್ಕೆ ಪ್ರಮುಖ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಅತಿಯಾದ ಪೂರ್ವ ಮುಂಗಾರು ಮಳೆ ಬಂದಿದ್ದು ಕೂಡ ಇದಕ್ಕೆ ಕಾರಣವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ತಜ್ಞರ ವರದಿ ಬಂದ ನಂತರ ವರದಿಯಲ್ಲಿರುವ ಅಂಶಗಳನ್ನು ಅನುಸರಿಸಲು ರೈತರಿಗೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ಹೈದರಾಬಾದ್‌ನ ಐಸಿಎಆರ್- ಐಐಎಂಆರ್ ಡಬ್ಲ್ಯೂಎನ್‌ಸಿಯ ಎಐಸಿಆರ್‌ಪಿ (ಮೆಕ್ಕೆಜೋಳ) ವಿಭಾಗದ ನೋಡಲ್ ಅಧಿಕಾರಿ ಡಾ. ಸುನಿಲ್ ನೀಲಂ, ಹೈದರಾಬಾದ್ ಕೇಂದ್ರದ ಮೆಕ್ಕೆಜೋಳ ರೋಗಶಾಸ್ತ್ರಜ್ಞ ಡಾ. ಮಲ್ಲಿಕಾರ್ಜುನ, ಮಂಡ್ಯ ಕೇಂದ್ರ ಮೆಕ್ಕೆಜೋಳ ರೋಗಶಾಸ್ತ್ರಜ್ಞ ಡಾ. ಇ. ಮಲ್ಲಿಕಾರ್ಜುನ, ಧಾರವಾಡ ಯುಎಎಸ್ ನ ಮೆಕ್ಕೆಜೋಳ ರೋಗಶಾಸ್ತ್ರಜ್ಞ ಡಾ. ಪ್ರೇಮಾ, ಧಾರವಾಡ ಯುಎಎಸ್‌ನ ಎಸ್‌ಆರ್ ಅಗ್ರಾನೊಮಿಸ್ಟ್ ಡಾ. ಸಲಾಕಿನ್‌ಕೋಪ್, ಜಂಟಿ ಕೃಷಿ ನಿರ್ದೇಶಕ ರಮೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.