ಜಿಲ್ಲೆ

ಬಿಳಿಕೆರೆ ಗ್ರಾಮದಲ್ಲಿ ಕೆರೆಗೆ ಶಾಸಕರಿಂದ ಬಾಗಿನ ಅರ್ಪಣೆ.

ಚನ್ನರಾಯಪಟ್ಟಣ : ಪೂರ್ವ ಮುಂಗಾರಿನಿಂದಲೂ ವ್ಯಾಪಕ ಮಳೆ ಸುರಿಯುತ್ತಿರುವ ಪರಿಣಾಮ ತಾಲೂಕು ವ್ಯಾಪ್ತಿ ಸುಮಾರು 250ಕ್ಕೂ ಹೆಚ್ಚು ಕಿಮೀ ಯಷ್ಟು ರಸ್ತೆ ಹಾಳಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.


ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ಮೈದುಂಬಿ ಹರಿಯುತ್ತಿರುವ ಕೆರೆಗೆ ವಿಶೇಷ ಗಂಗೆಪೂಜೆ ಸಲ್ಲಿಸಿ ಭಾನುವಾರ ಬಾಗಿನ ಸಮರ್ಪಿಸಿ ಮಾತನಾಡಿ, ಡಿಂಕ ಸೇರಿದಂತೆ ಮೂರು ಕಡೆ ರಸ್ತೆ ಕೊಚ್ಚಿ ಹೋಗಿದೆ ಎಂದರು.


ಅಲ್ಲದೇ 90 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಹಾಗೂ ಕೆಲ ಸರ್ಕಾರಿ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದು ಅವುಗಳ ದುರಸ್ತಿ ಜತೆಗೆ ಹೆಚ್ಚುವರಿ 60 ಹೊಸಾ ಕಟ್ಟಡಗಳ ಅಗತ್ಯವಿದೆ. ಇನ್ನು ಕೃಷಿ ಜಮೀನು ಜಲಾವೃತಗೊಂಡಿರುವ ಪರಿಣಾಮ ಬೆಳೆಗಳಿಗೆ ಹಾನಿಯಾಗಿದೆ ಎಂದು ತಿಳಿಸಿದರು.


ಇದರಿಂದ ತಾಲೂಕಿನಲ್ಲಿ ಸಂಭವಿಸಿರುವ ಹಾನಿ ಸರಿಪಡಿಸಲು ಸದ್ಯಕ್ಕೆ 250 ಕೋಟಿ ರೂ. ಅನುದಾನ ಅಗತ್ಯವಿದೆ. ಇನ್ನು ತಗ್ಗು ಪ್ರದೇಶದಲ್ಲಿ ಜೋಗು ಹರಿಯುತ್ತಿರುವ ಪರಿಣಾಮ ಶೀತಪೀಡಿತಗೊಂಡು ತೆಂಗಿನ ಮರಗಳು ನಾಶವಾಗುತ್ತಿದ್ದು ಸರ್ಕಾರ ತೆಂಗು ಬೆಳೆಗಾರರ ನೆರವಿಗೆ ನಿಲ್ಲಬೇಕು ಎಂದು ಮನವಿ ಮಾಡಿದರು.


ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಆರ್.ವಾಸು, ಕಬ್ಬಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪೃಥ್ವಿಕುಮಾರ್, ಮಾಜಿ ಅಧ್ಯಕ್ಷರಾದ ರಂಗೇಗೌಡ, ಶಿವನಂಜೇಗೌಡ, ರಾಜೇಗೌಡ, ಸದಸ್ಯರಾದ ಟಿ.ಮಂಜೇಗೌಡ, ರತ್ನ ಕುಮಾರಸ್ವಾಮಿ, ದಿಡಗ ಸೋಸೈಟಿ ಮಾಜಿ ಅಧ್ಯಕ್ಷ ಎಸ್.ಕುಮಾರ್, ಪ್ರಮುಖರಾದ ಪಟೇಲ್ ರಂಗೇಗೌಡ, ಕಾಂತರಾಜ್, ಜಗದೀಶ್ ಹಾಗೂ ಇತರರು ಇದ್ದರು.