ಜಿಲ್ಲೆ

ಬಿಲ್ ಪಾವತಿಸದಿದ್ದಲ್ಲಿ ಅಮಾನತಿಗೆ ಶಿಫಾರಸು

reportermys

ಮೈಸೂರು: ಗುತ್ತಿಗೆದಾರರಿಗೆ ಹಣ ಪಾವತಿ ಮಾಡದೆ ಆರ್ಥಿಕ ಪ್ರಗತಿ ಸಾಧಿಸದ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಜಯರಾಮ್ ಅವರು, ಒಂದು ದಿನದೊಳಗೆ ಬಿಲ್ ಪಾವತಿಸದಿದ್ದಲ್ಲಿ ಅಮಾನತಿಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.


ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ವಿವೇಕ ಶಾಲಾ ಕೊಠಡಿ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಮಂಜೂರಾಗಿರುವ ಅನುದಾನ ಖರ್ಚು ಮಾಡುವಲ್ಲಿ ವಿಳಂಬ ಮತ್ತು ಗುತ್ತಿಗೆದಾರರಿಗೆ ಹಣ ಪಾವತಿ ಮಾಡದೆ ಆರ್ಥಿಕ ಪ್ರಗತಿ ಸಾಧಿಸದ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಗೆ ಕಾರಣ ಕೇಳಿ ಷೋಕಾಸ್ ನೋಟಿಸ್ ಜಾರಿಗೊಳಿಸಲು ಜಿಪಂ ಸಿಇಒಗೆ ನಿರ್ದೇಶಿಸಿದರು.


ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್) ಮೈಸೂರು ಮತ್ತು ಹುಣಸೂರು ವಿಭಾಗಕ್ಕೆ ಅನುದಾನ ಮಂಜೂರಾಗಿದ್ದರೂ ಭೌತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಿಲ್ಲ. 4 ಕೋಟಿ ರೂ. ಮಂಜೂರಾದರೂ 11 ತಿಂಗಳಲ್ಲಿ ನಯಾಪೈಸೆ ಖರ್ಚು ಮಾಡಿಲ್ಲ. ಟೆಂಡರ್ ಕರೆದು ಕಾರ್ಯಾದೇಶ ಕೊಡುವುದಕ್ಕೆ ವಿಳಂಬ ಮಾಡಲು ಕಾರಣವೇನು ಎಂದು ಪ್ರಶ್ನಿಸಿದರು.


ಬಿಲ್ ಆಗದ ಕಾರಣ ಗುತ್ತಿಗೆದಾರರು ನಿಮ್ಮ ಕಚೇರಿ ಹತ್ತಿರ ಭಿಕ್ಷುಕರ ರೀತಿಯಲ್ಲಿ ನಿಂತುಕೊಂಡಿರುತ್ತಾರೆ. ಆ ರೀತಿ ಅಲೆಸುತ್ತಿರಿ. ಕಾಮಗಾರಿ ಮುಗಿಸಿದ ಮೇಲೆ ಬಿಲ್ ಪಾವತಿ ಮಾಡದೆ ವಿಳಂಬ ಮಾಡುವುದೇಕೆ? ನೀವು ಬಳಕೆ ಮಾಡದಿದ್ದಲ್ಲಿ ಹಣ ವಾಪಸ್ ಹೋಗುವುದಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು.


ಇದಕ್ಕೆ ಸಮರ್ಪಕ ಉತ್ತರ ನೀಡಲು ಅಧಿಕಾರಿಗಳು ತಡವರಿಸಿದರು. ಇದರಿಂದಾಗಿ ಇನ್ನಷ್ಟು ಅಸಮಾಧಾನಗೊಂಡ ಜಯರಾಮ್ ಅವರು, ನಿಮ್ಮೆಲ್ಲರ ಅಮಾನತಿಗೆ ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಬೇಕು. ಅದನ್ನು ಸಿದ್ಧಪಡಿಸಿಕೊಂಡು ಬನ್ನಿ ಎಂದು ಹೇಳುತ್ತಿದ್ದಂತೆ ಅಧಿಕಾರಿಗಳು ಬೆಚ್ಚಿದಲ್ಲದೆ ಕೆಲವರು ಹೆಚ್ಚಿನ ವಿವರಣೆ ನೀಡುವ ಮೂಲಕ ತುರ್ತುಪತ್ರ ಬರೆಯುವುದರಿಂದ ತಪ್ಪಿಸಿಕೊಂಡರು.


ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಮಾರ್ಚ್ ಒಳಗೆ ಖರ್ಚು ಮಾಡಬೇಕು. ಒಂದು ವೇಳೆ ಬಳಸದೆ ವಾಪಸ್ ಹೋದರೆ ಆ ಅಧಿಕಾರಿಗಳನ್ನು ಅಮಾನತುಪಡಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಎಚ್ಚರಿಸಿದರು.