ಆರ್. ವೇಣುಗೋಪಾಲ್  
ಜಿಲ್ಲೆ

ಬಿಲ್ ಪಾವತಿ ಕೌಂಟರ್ ಪುನರಾರಂಭವಾಗಲಿ

ಭದ್ರಾವತಿ: ನಗರದ ಜನ್ನಾಪುರ ನಗರಸಭೆ ಎನ್‌ಟಿಬಿ ಶಾಖಾ ಕಚೇರಿ ಆವರಣದಲ್ಲಿ ವಿದ್ಯುತ್ ಬಿಲ್ ಪಾವತಿಸುವ ಕೌಂಟರ್ ಪುನಃ ಆರಂಭಿಸಬೇಕು ಹಾಗೂ ತಾಲೂಕಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಉಂಟಾಗುತ್ತಿರುವ ವಿದ್ಯುತ್ ವ್ಯತ್ಯಯ ಸರಿಪಡಿಸುವಂತೆ ಆಗ್ರಹಿಸಿ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್‌ನ ಚೇರ್ಮನ್ ಆರ್.ವೇಣುಗೋಪಾಲ್ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರನ್ನು ಒತ್ತಾಯಿಸಿದ್ದಾರೆ. ನಗರಸಭಾ ವ್ಯಾಪ್ತಿಯ ಜನ್ನಾಪುರ, ಎನ್‌ಟಿಬಿ ಕಚೇರಿ ಆವರಣದಲ್ಲಿ ಸುಮಾರು 40 ವರ್ಷದಿಂದ ವಿದ್ಯುತ್ ಬಿಲ್ ಪಾವತಿಸುವ ಕೌಂಟರ್ ಕಾರ್ಯ ನಿರ್ವಹಿಸುತ್ತಿತ್ತು. ಇಲ್ಲಿನ ನೌಕರ ನಿವೃತ್ತಿ ಹೊಂದಿದ ನಂತರ ಕೌಂಟರ್ ಸ್ಥಗಿತಗೊಂಡಿದೆ. ಈ ಭಾಗದಲ್ಲಿ ಅನೇಕ ಕೊಳಚೆ ಪ್ರದೇಶಗಳಿದ್ದು, ಇವರಲ್ಲಿ ಬಹುತೇಕರು ಅನಕ್ಷರಸ್ಥರು. ಅವರಿಗೆ ಮೊಬೈಲ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸುವ ತಿಳಿವಳಿಕೆ ಇಲ್ಲ. ಇಲ್ಲಿನ ನಿವಾಸಿಗಳು ವಿದ್ಯುತ್ ಬಿಲ್ ಪಾವತಿಗೆ ತುಂಬ ದೂರ ಹೋಗಬೇಕಿದೆ. ಹಾಗಾಗಿ ಕೌಂಟರ್ ಮರು ಆರಂಭಿಸಬೇಕು ಎಂದು ಹೇಳಿಕೆ ನೀಡಿದ್ದಾರೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿಂಗನಮನೆ, ತಾವರಘಟ್ಟ ಮತ್ತು ಕಂಬದಾಳು ಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.