ಜಿಲ್ಲೆ

ಬಿರ್ಸಾ ಮುಂಡಾ ಹೆಸರಲ್ಲಿ ಶಾಲಾ-ಕಾಲೇಜು ಆರಂಭಿಸ ಬೇಕು

ಚಿತ್ರದುರ್ಗ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಗವಾನ್ ಬಿರ್ಸಾ ಮುಂಡಾ ಅವರ ಹೆಸರಲ್ಲಿ ಶಾಲಾ-ಕಾಲೇಜು ಆರಂಭಿಸಬೇಕಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.

ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಜಿಲ್ಲಾಡಳಿತ, ಜಿಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗ ರದ ಕ್ರೀಡಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ, ಧರ್ತಿ ಆಭಾ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವ ಬುಡಕಟ್ಟು ಸಮುದಾಯಗಳ ಹೆಮ್ಮೆ ದಿನಾಚರಣೆ ಹಾಗೂ ಧರ್ತಿ ಆಭಾ ಜನ್‌ಜಾತಿಯ ಗ್ರಾಮ ಉತ್ಕರ್ಷ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಶಾಲಾ-ಕಾಲೇಜುಗಳು ಸ್ಥಾಪನೆಯಾದರೆ ಯುವ ಜನರಿಗೆ ಭಗವಾನ್ ಬಿರ್ಸಾ ಮುಂಡಾ ಅವರ ಹೋರಾಟದ ಮಹತ್ವ ಪರಿಚಯವಾಗಲಿದೆ. ಸರ್ಕಾರಿ ಕಾರ‌್ಯಕ್ರಮಗಳ ಮೂಲಕ ಬಿರ್ಸಾ ಮುಂಡಾ ಅವರ ಹೆಚ್ಚಿನ ಪರಿಚಯ ಮಾಡಬೇಕು. ಇದರಿಂದಾಗಿ ಏಕತೆ, ದೇಶಪ್ರೇಮ ಬೆಳೆಸುವ ನಿಟ್ಟಿನಲ್ಲಿ ಯುವಜನರನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಹೇಳಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆದಿವಾಸಿಗಳು, ಗುಡ್ಡಗಾಡು ಜನರು, ಕೆಳ ವರ್ಗದವರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ಹೋರಾಡಿದ್ದಾರೆ. ಸ್ವಾತಂತ್ರೃ ಹೋರಾಟಕ್ಕೆ ಹಲಗಲಿ ಬೇಡರ ಕೊಡುಗೆ ಅಪಾರ ಎಂದು ತಿಳಿಸಿದರು.

ಕೃಷಿ ಇಲಾಖೆಯಿಂದ ಫಲಾನುಭವಿಗಳಿಗೆ ಮಣ್ಣು ಪರೀಕ್ಷೆ ಕಾರ್ಡ್, ಕೃಷಿ ಯಂತ್ರೋಪಕರಣಗಳನ್ನು ಸಂಸದರು ವಿತರಿಸಿದರು. ಎಡಿಸಿ ಬಿ.ಟಿ. ಕುಮಾರಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಾಧುರಿ ಗಿರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ಇದ್ದರು.