ಬಳ್ಳಾರಿ : ವಿಧಾನ ಪರಿಷತ್ ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆ ಬಳ್ಳಾರಿಯಲ್ಲಿ ಬಿರುಸಿನ ಮತದಾನ ನಡೆಯಿತು.
ಜಿಲ್ಲಾದ್ಯಂತ 24,183 ಮತಗಳಲ್ಲಿ ಪುರುಷರು 10,252 ಹಾಗೂ ಮಹಿಳೆಯರು 5,594 ಸೇರಿ ಒಟ್ಟಾರೆ 15,846 ಮತ ಚಲಾವಣೆಯಾಗಿವೆ. ಶೇ. 65.55% ರಷ್ಟು ಮತದಾನ ನಡೆಯಿತು. ಇತರೆ ನಾಲ್ಕು ಮತಗಳು ಇದ್ದವು ಆದರೆ, ಒಬ್ಬರು ಮತ ಚಲಾವಣೆ ಮಾಡಿಲ್ಲ.
ಜಿಲ್ಲೆಯ ಕಂಪ್ಲಿ , ಸಿರುಗುಪ್ಪ , ಸಂಡೂರು ತಲಾ ನಾಲ್ಕು, ಬಳ್ಳಾರಿ ಗ್ರಾಮೀಣ ಐದು ಹಾಗೂ ಬಳ್ಳಾರಿ ನಗರದಲ್ಲಿ ಏಳು ಮತಗಟ್ಟೆಗಳು ಸೇರಿ ಒಟ್ಟು 24 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿತ್ತು. ಈ ಬಾರಿ ಕಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಚಂದ್ರಶೇಖರ್ ಪಾಟೀಲ್, ಬಿಜೆಪಿ ಯಿಂದ ಅಮರನಾಥ ಪಾಟೀಲ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬೆಳಗ್ಗೆ ಎಂಟ ರಿಂದ ಮತದಾನ ಪ್ರಕ್ರಿಯೆ ಆರಂಭಗೊಂಡು ನಾಲ್ಕು ಗಂಟೆಯವರೆಗೆ ನಡೆಯಿತು. ಬಹುತೇಕ ಮತಗಟ್ಟೆಗಳಲ್ಲಿ ಮತದಾರರ ಸಾಲು ಕಂಡು ಬಂದಿತು. ಮೊದಲ ಬಾರಿಗೆ ಹೋಬಳಿ ಮಟ್ಟದಲ್ಲಿ ಮತಗಟ್ಟೆ ತೆರದಿದ್ದಕ್ಕೆ ಗ್ರಾಮೀಣ ಪ್ರದೇಶದ ಹರ್ಷದಿಂದ ಮತ ಚಲಾಯಿಸಿದರು. ಒಟ್ಟಾರೆ ಮೊದಲರೆಡು ತಾಸು ಚುರುಕಿನ ಮತದಾನ ನಡೆಯಲಿಲ್ಲ, ನಂತರ ಬಿರುಸಿನ ಮತದಾನ ನಡೆಯಿತು. ಜಿಲ್ಲೆ ಸೇರಿದಂತೆ ಕುರುಗೋಡು, ಸಿರುಗುಪ್ಪ, ಸಂಡೂರು ಮತ್ತು ಕಂಪ್ಲಿ ತಾಲೂಕು ಕೇಂದ್ರ ಹೋಬಳಿಗಳಾದ ಮೋಕಾ, ರೂಪನಗುಡಿ, ಕೋಳೂರು, ಚೋರನೂರು, ತೋರಣಗಲ್ಲು, ತೆಕ್ಕಲಕೋಟೆ ಹಾಗೂ ಕರೂರಿನಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಭಾನುವಾರ ತಡರಾತ್ರಿ ಸುರಿದ ಮಳೆಯಿಂದ ಇಲ್ಲಿನ ಬಾಲಭಾರತಿ ಶಾಲೆಯಲ್ಲಿ ಮಳೆ ನೀರು ನಿಂತಿದ್ದರಿಂದ ಆಗ್ನಿಶಾಮಕ ದಳ ಹಾಗೂ ಪಾಲಿಕೆ ಸಿಬ್ಬಂದಿ ನೀರನ್ನು ಮೋಟಾರ್ ಮೂಲಕ ಹೊರಗೆ ಹಾಕಿ ಮತದಾನ ಮಾಡಲು ಅನುಕೂಲ ಮಾಡಿಕೊಟ್ಟರು. ಪ್ರತಿ ಹೋಬಳಿ ಕೇಂದ್ರಕ್ಕೆ ಮತದಾರರನ್ನು ಕರೆದುಕೊಂಡು ಹೋಗಲು ಅಭ್ಯರ್ಥಿಗಳು ಟ್ರಾಕ್ಸ್ ವ್ಯವಸ್ಥೆ ಮಾಡಿದ್ದರು. ಅನೇಕ ಹಿರಿಯ ಪದವೀಧರರು ಸಹ ಇದೇ ಮೊದಲ ಬಾರಿಗೆ ತಾವು ಇಂತಹ ಚುನಾವಣೆಯಲ್ಲಿ ಮತದಾನ ಮಾಡಿದ್ದು ಕಂಡುಬಂತು. ಮೋಕಾ ಹೋಬಳಿಯಲ್ಲಿ ಪದವೀಧರ ಅಂಧರೊಬ್ಬರು ಆಸಕ್ತಿಯಿಂದ ಮತ ಚಲಾಯಿಸಿದರು.