ಹಾಸನ : ವಿದ್ಯುತ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ವಿದ್ಯುತ್ ಅದಾಲತ್ ಸಹಕಾರಿ ಎಂದು ಎಸ್ಕಾಂ ಮೈಸೂರು ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಜಯವೈಭವ್ ತಿಳಿಸಿದರು.
ಹಾಸನ ತಾಲ್ಲೂಕಿನ ಯಲಗುಂದದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯುತ್ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರ ಸಮಸ್ಯೆ ಆಲಿಸಲು ಪ್ರತಿ ತಿಂಗಳ ಮೂರನೇ ಶನಿವಾರ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಅದಾಲತ್ ನಡೆಸಲಾಗುತ್ತಿದೆ. ಸರ್ಕಾರ ಅನೇಕ ಯೋಜನೆಗಳನ್ನು ತಂದಿದ್ದು, ಗ್ರಾಹಕರು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬಿಪಿಎಲ್ ಕಾರ್ಡ್ ಹೊಂದಿರುವರಿಗೆ ಸರ್ಕಾರ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಿದ್ದು, ಈ ಯೋಜನೆಯ ಉಪಯೋಗ ಪಡೆದುಕೊಳ್ಳಬೇಕು. ಎಸ್ಸಿ - ಎಸ್ಟಿ ಸಮುದಾಯದವರ ಶ್ರೇಯೋಭಿವೃದ್ದಿಗೆ ತಿಂಗಳಿಗೆ 75 ಯುನಿಟ್ ವಿದ್ಯುತ್ ನೀಡಲು ಸರ್ಕಾರ ಮುಂದಾಗಿದೆ. ರೈತರು ಬೋರ್‌ವೆಲ್‌ಗೆ ಅಕ್ರಮ -ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿ ವಿದ್ಯುತ್ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಾನೂನುಬಾಹಿರವಾಗಿ ವಿದ್ಯುತ್ ಪಡೆಯಲು ಮುಂದಾಗಬಾರದು. ಸರ್ಕಾರ ಇನ್ನೂ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಸಾರ್ವಜನಿಕರು ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಯೋಜನೆ ಉಪಯೋಗ ಪಡೆದು ಕೊಳ್ಳಬೇಕು ಎಂದರು.
ವಿದ್ಯುತ್ ಇಲಾಖೆ ನಷ್ಟದಲ್ಲಿದ್ದು, ಗ್ರಾಹಕರು ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್‌ಪಾವತಿ ಮಾಡಬೇಕು. ನೀವು ಬಿಲ್ ಪಾವತಿ ಮಾಡಿಲ್ಲ ಎಂದರೆ ವಿದ್ಯುತ್ ಇಲಾಖೆ ಖಾಸಗಿಕರಣ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ ಇದಕ್ಕೆ ಆಸ್ಪದ ಕೊಡಬಾರದು ಎಂದ ಅವರು, ಈಗಾಗಲೇ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇಲಾಖೆಯ ಆರ್ಥಿಕ ಮಟ್ಟ ಹೆಚ್ಚಿಸಲು ಶ್ರಮಿಸು ತ್ತಿದ್ದಾರೆ. ಅದಕ್ಕೆ ಗ್ರಾಹಕರು ಸಹಕರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಸುತ್ತಮುತ್ತಲ ಹಳ್ಳಿಯ ಸಾರ್ವಜನಿಕರು ಭಾಗವಹಿಸಿ ದೂರು ಅರ್ಜಿಗಳನ್ನು ನೀಡುವ ಮೂಲಕ ವಿದ್ಯುತ್ ಸಮಸ್ಯೆಗಳನ್ನು ಹೇಳಿಕೊಂಡರು. ಇದಕ್ಕೆ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳು ಪರಿಹಾರ ಕಂಡುಕೊಳ್ಳುವ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಹಾಸನ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅರ್ಜುನ್, ಯಲಗುಂದ ಗ್ರಾಪಂ ಅಧ್ಯಕ್ಷೆ ಶೀಲಾ ಜಯರಾಂ, ಉಪಾಧ್ಯಕ್ಷೆ ರೇಖಾ ವಿನಯ, ದುದ್ದ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಂಗೇಗೌಡ, ಕೆಪಿಟಿಸಿಲ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನಯ್ಯ, ನಿಟ್ಟೂರು ಶಾಖೆ ಕಿರಿಯ ಇಂಜಿನಿಯರ್ ಮಧು ಬಿ.ಆರ್, ಸಾಲಗಾಮೆ ಶಾಖೆಯ ಕಿರಿಯ ಇಂಜಿನಿಯರ್ ಎಚ್.ಎಚ್. ಪ್ರಕಾಶ್ ಇನ್ನಿತರರು ಇದ್ದರು.