ಸೊರಬ: ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ, ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ಹಳೇ ಸೊರಬದ 62 ವರ್ಷದ ಮಹಿಳೆಯಲ್ಲಿ ಕರೊನಾ ವೈರಸ್ ಪಾಸಿಟಿವ್ ಬಂದಿರುವುದು ತಾಲೂಕಿನ ಜನರ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಈ ಮಹಿಳೆ ಮೇ 17ರಂದು ಉಸಿರಾಟದ ತೊಂದರೆ ಹಾಗೂ ಬಿಪಿ ಚೆಕಪ್ ಮಾಡಿಸಲು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದು ಡಾ. ರಾಘವೇಂದ್ರ ಅವರು ಚಿಕಿತ್ಸೆ ನೀಡಿ ಅಲ್ಲಿಂದ ಆಂಬುಲೆನ್ಸ್ ಮೂಲಕ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ಅಲ್ಲಿ ವೃದ್ಧೆ ಒಂದು ದಿನ ಉಳಿದು ಚಿಕಿತ್ಸೆ ಪಡೆದುಕೊಂಡು ಮೇ 18ರ ಸಂಜೆ ಓಮ್ನಿಯಲ್ಲಿ ಮನೆಗೆ ಕರೆತರಲಾಗಿದೆ. ನಂತರ ಅವಳ ಗಂಟಲು ದ್ರವದ ಮಾದರಿಯಲ್ಲಿ ಪಾಸಿಟಿವ್ ಬಂದ ಬಗ್ಗೆ ಬುಧವಾರ ರಾತ್ರಿ ತಿಳಿದು ಬಂದ ಹಿನ್ನೆಲೆಯಲ್ಲಿ ಮಹಿಳೆಯನ್ನು ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಈಕೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಗಂಡ, ಮಗ, ಮೊಮ್ಮಗಳು, ಅತ್ತಿಗೆ ಹಾಗೂ ಓಮ್ನಿ ಚಾಲಕನನ್ನು ಕೂಡ ಜಿಲ್ಲಾಸ್ಪತ್ರೆ ಕ್ವಾರಂಟೈನ್ಗೆ ಕಳುಹಿಸಿ ಕೊಡಲಾಗಿದೆ.
ಮೈದುನನ ಮದುವೆಗೆ ಹೋಗಿದ್ದ ಮಹಿಳೆ: ಮೇ 13ರಂದು ಮಹಿಳೆಯ ಮೈದುನನ ಮಗಳ ಮದುವೆಯಾಗಿದ್ದು ಅಲ್ಲಿಗೆ ಹೋಗಿದ್ದಳು. ಅಲ್ಲದೆ ಮದುವೆ ಎಂದು ಸಾಮಗ್ರಿ ಕೊಳ್ಳಲು ಪಟ್ಟಣದ ಪಾತ್ರೆ, ಬಟ್ಟೆ ಇತರೆ ಅಂಗಡಿಗೆ ಬಂದಿದ್ದರು. ಅಲ್ಲದೆ ಇವರ ಪ್ರಾಥಮಿಕ ಸಂಪರ್ಕದಲ್ಲಿರುವ ಮಗ, ಸೊಸೆ ಮತ್ತು ಮೊಮ್ಮಕ್ಕಳು ಮಣ್ಣತ್ತಿ ಗ್ರಾಮಕ್ಕೆ ಮದುವೆಗೆ ಹೋಗಿದ್ದರು. ಜತೆಗೆ ಬುಧವಾರ ಏರ್ಪಡಿಸಿದ್ದ ಕುಳುವಳ್ಳಿ ಮದುವೆಗೂ ಅವರ ಮಗ, ಸೊಸೆ ತೆರಳಿದ್ದರು. ಅಲ್ಲದೆ ಅವರ ಮಗ ಹಲವರ ಜತೆ ತಿರುಗಾಟ ನಡೆಸಿದ್ದಾನೆ.
ವೃದ್ಧೆಯ ಮನೆಗೆ ಚಂದ್ರಗುತ್ತಿ, ಬನವಾಸಿಯಿಂದ ನೆಂಟರು ಬಂದಿದ್ದರು. ಸೆಕೆಂಡರಿ ಸಂಪರ್ಕದ ಮಾಹಿತಿಯನ್ನು ಆಶಾ ಕಾರ್ಯಕರ್ತೆಯರು, ವೈದ್ಯರು ಹಾಗೂ ಪೊಲೀಸರು ಕಲೆ ಹಾಕುತ್ತಿದ್ದಾರೆ. ಮಗ, ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳು ಬೇರೆ ಇದ್ದು ಆಗಾಗ್ಗೆ ಮಹಿಳೆಯ ಮನೆಗೆ ಬಂದು ಹೋಗುತ್ತಿದ್ದರು. ವೃದ್ಧೆಯ ಜತೆ ಗಂಡ ಮತ್ತ ಓರ್ವ ಮಗಳು ಮನೆಯಲ್ಲಿ ಇದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಹಳೇ ಸೊರಬ ಕಂಟೈನ್ಮೆಂಟ್ ಜೋನ್: ತಾಲೂಕಿನ ಹಳೇ ಸೊರಬದಲ್ಲಿ ಕರೊನಾ ಸೋಂಕು ದೃಢಪಟ್ಟ ವೃದ್ಧೆಯ ಮನೆಯಿಂದ 100 ಮೀಟರ್ ಸುತ್ತ ಯಾರೂ ಹೋಗದಂತೆ ಕಂಟೈನ್ವೆುಂಟ್ ಜೋನ್ ಆಗಿ ಘೊಷಣೆ ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಡಾ. ಎಲ್.ನಾಗರಾಜ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಅವರು, ಈ ಪ್ರದೇಶಗಳಲ್ಲಿ ಯಾವುದೇ ಅಂಗಡಿ ಮುಂಗಟ್ಟು ತೆರೆಯುವಂತಿಲ್ಲ ಹಾಗೂ ಒಳಗಡೆ ಇರುವ ಕುಟುಂಬಗಳಿಗೆ ಅಗತ್ಯವಿರುವ ಸೌಲಭ್ಯ ಒದಗಿಸಲಾಗುವುದು. ಆ ನಂತರದ 5 ಕಿಮೀ ವ್ಯಾಪ್ತಿಯಲ್ಲಿ ಬಫರ್ ಜೋನ್ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಜನರ ಚಲನವಲನವಿದ್ದು ಬ್ಯೂಟಿಪಾರ್ಲರ್, ಸಲೂನ್, ಮದ್ಯದ ಅಂಗಡಿ ಮುಚ್ಚಲಾಗುತ್ತದೆ ಎಂದರು.
ಇನ್ನು ಮದುವೆ ಮಾಡುವವರು ಕಡ್ಡಾಯವಾಗಿ ಗ್ರಾಪಂನಿಂದ ಪರವಾನಗಿ ಪಡೆದು ಪರಸ್ಪರ ಅಂತರವನ್ನು ಕಾಯ್ದುಕೊಂಡು ಕೇವಲ 50 ಜನರು ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಬೇಕು. ಅದಕ್ಕಿಂತ ಹೆಚ್ಚು ಜನರನ್ನು ಸೇರಿಸಿದ ಹಾಗೂ ಮದುವೆಯಲ್ಲಿ ಊಟ ಹಾಕಿದರೆ ಅಂತಹವರ ವಿರುದ್ಧ ಕೇಸು ದಾಖಲಿಸುವಂತೆ ಸೂಚಿಸಿದರು.
ಸೊರಬದಲ್ಲಿ ಸ್ವಯಂಪ್ರೇರಿತ ಲಾಕ್ಡೌನ್: ಗುರುವಾರ ಬೆಳಗಾಗುತ್ತಿದ್ದಂತೆ ತಾಲೂಕಿನೆಲ್ಲೆಡೆ ಹಳೇ ಸೊರಬ ಗ್ರಾಮದಲ್ಲಿ ಮಹಿಳೆಗೆ ಕರೊನಾ ಇದೆ ಎಂಬ ಸುದ್ದಿ ಹರಡುತ್ತಿದ್ದಂತೆ ತಾಲೂಕಿನ ಜನತೆಗೆ ಬರ ಸಿಡಿಲು ಬಡಿದಂತಾಗಿತ್ತು. ಪಟ್ಟಣದಿಂದ ಕೂಗಳತೆಯಲ್ಲಿರುವ ಗ್ರಾಮದಲ್ಲಿ ಸೋಂಕು ಪತ್ತೆಯಾಗಿದ್ದನ್ನು ತಿಳಿದು ಪಟ್ಟಣದ ಅಂಗಡಿ ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಮತ್ತೆ ಲಾಕ್ಡೌನ್ ಮರುಕಳಿಸಿದಂತಾಗಿ ಪಟ್ಟಣ ಬಿಕೋ ಎನ್ನುತ್ತಿತ್ತು. ಆರೋಗ್ಯ ಇಲಾಖೆ ಹಾಗೂ ಪೊಲೀಸರು ಭೇಟಿ ನೀಡಿ ಮಹಿಳೆಯ ಮನೆಯಿಂದ 100 ಮೀಟರ್ ದೂರದಲ್ಲಿ ಬ್ಯಾರಿಕೇಡ್ ಹಾಕಿ ಯಾರು ಒಳಗೆ, ಮತ್ತೆ ಹೊರಗೆ ಹೋಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ.