ಜಿಲ್ಲೆ

ಬಿದ್ರಕಾನ ಸೊಸೈಟಿ ಸುವರ್ಣ ಮಹೋತ್ಸವ 15ರಂದು

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ: ತಾಲೂಕಿನ ಬಿದ್ರಕಾನ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಸುವರ್ಣ ಮಹೋತ್ಸವ, ನೂತನ ಕಟ್ಟಡ ಹಾಗೂ ಎಪಿಎಂಸಿ ಗೋದಾಮ ಉದ್ಘಾಟನೆ ಮಾ.15ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪರಮೇಶ್ವರ ಸುಬ್ರಾಯ ಹೆಗಡೆ ಹುಲಿಮಕ್ಕಿ ಹೇಳಿದರು.

ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು ಈ ಮೊದಲು ಇದ್ದ ಸಂಘದ ಕಟ್ಟಡ ಶಿಥಿಲಗೊಂಡಿದ್ದರಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ವ್ಯವಸ್ಥಿತವಾದ ನೂತನ ಕಟ್ಟಡ ನಿರ್ವಿುಸಲಾಗಿದೆ. ಸಂಘದ ಎಲ್ಲ ವ್ಯವಹಾರಗಳೂ ಗಣಕೀಕರಣಗೊಂಡಿದ್ದು ಸದಸ್ಯರ ಆಶೋತ್ತರಗಳಿಗೆ ಸ್ಪಂದಿಸುವುದಕ್ಕಾಗಿ ಸೂಪರ್ ಮಾರ್ಕೆಟ್ ಆರಂಭಿಸುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷರನ್ನು, ಸದಸ್ಯರನ್ನು, ಸಂಘದ ವ್ಯಾಪ್ತಿಯಲ್ಲಿ ಸಾಮಾಜಿಕ ಸೇವೆ ಸಲ್ಲಿಸಿದವರನ್ನು ಹಾಗೂ ನಿವೃತ್ತಿ ಹೊಂದಿದ ಮುಖ್ಯಕಾರ್ಯನಿರ್ವಾಹಕರನ್ನು ಸನ್ಮಾನಿಸಲಾಗುತ್ತದೆ.

ಸಂಘದ ಸುವರ್ಣ ಮಹೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಅಂಗವಾಗಿ ಮಾ.12ರಂದು ಬೆಳಗ್ಗೆ ಗಣಹವನ, ಶ್ರೀಲಕ್ಷ್ಮೀಸೂಕ್ತ ಹವನ, ಪೂರ್ಣಾಹುತಿ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.

ಮಧ್ಯಾಹ್ನ 3ರಿಂದ ವಿಚಾರ ಗೋಷ್ಠಿ ನಡೆಯಲಿದೆ. ಕೃಷಿ ತಜ್ಞ ವಿ.ಎಂ.ಹೆಗಡೆ ಅವರು ಕೃಷಿಯಲ್ಲಿ ಆಧುನಿಕತೆಯ ಅಳವಡಿಕೆ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಹೆಗಡೆ ಕಾಗೇರಿ ಸಹಕಾರಿ ಸಂಘಗಳಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆ ಕುರಿತು ಮಾತನಾಡುವರು. ಸಂಜೆ 7ರಿಂದ ರಂಗ ಸೌಗಂಧ ಸಿದ್ದಾಪುರ ಇವರಿಂದ ಎಸ್.ವಿ.ಹೆಗಡೆ ಮಗೇಗಾರ ರಚಿಸಿದ ದೇವಿಯ ದೀವಿಗೆ ನಾಟಕ ಪ್ರದರ್ಶನಗೊಳ್ಳಲಿದೆ.

ಉದ್ಘಾಟನೆ: ಮಾ.15ರಂದು ಬೆಳಗ್ಗೆ 10ಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಕಟ್ಟಡ, ಸಚಿವ ಶಿವರಾಮ ಹೆಬ್ಬಾರ ಸುವರ್ಣಮಹೋತ್ಸವ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ.ಗೌಡರ ಕಲ್ಲೂರು ಸಭಾಭವನ, ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಸುಪರ್ ಮಾರ್ಕೆಟ್, ಎಪಿಎಂಸಿ ಅಧ್ಯಕ್ಷ ಕೆ.ಜಿ. ನಾಗರಾಜ ನಾಯ್ಕ ಎಪಿಎಂಸಿ ಗೋದಾಮ ಉದ್ಘಾಟಿಸುವರು. ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ನಾಣ್ಯ ಬಿಡುಗಡೆ ಮಾಡುವವರು. ಸುವರ್ಣಮಹೋತ್ಸವ ಸಮಿತಿ ಗೌರವಾಧ್ಯಕ್ಷ ಸುಬ್ರಾಯ ಪ. ಹೆಗಡೆ ಕೆಳಗಿನಮನೆ ಅಧ್ಯಕ್ಷತೆ ವಹಿಸುವರು. ಜಿಪಂ ಸದಸ್ಯ ಎಂ.ಜಿ. ಹೆಗಡೆ, ತಾಪಂ ಅಧ್ಯಕ್ಷ ಸುಧೀರ ಗೌಡರ್, ಗ್ರಾಪಂ ಅಧ್ಯಕ್ಷೆ ಗೀತಾ ನಾಯ್ಕ, ಡಾ.ಶಶಿಭೂಷಣ ಹೆಗಡೆ ಮತ್ತಿತರರು ಉಪಸ್ಥಿತರಿರುತ್ತಾರೆ.

ಸಮಾರೋಪ: ಮಧ್ಯಾಹ್ನ 3ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ಸಂಸದ ಅನಂತಕುಮಾರ ಹೆಗಡೆ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್. ಘೊಟ್ನೇಕರ, ಪ್ರಮೋದ ಹೆಗಡೆ ಯಲ್ಲಾಪುರ ಮತ್ತಿತರರು ಉಪಸ್ಥಿತರಿರುತ್ತಾರೆ. ರಾತ್ರಿ.8.30ರಿಂದ ಖ್ಯಾತ ಕಲಾವಿದರಿಂದ ಮಾರುತಿ ಪ್ರತಾಪ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

ಸುಬ್ರಹ್ಮಣ್ಯ ಹೆಗಡೆ ಚಟ್ನಳ್ಳಿ, ಲಕ್ಷ್ಮೀಶ ಹೆಗಡೆ ಗೋಳಿಕೈ, ಗಣಪತಿ ನಾಯ್ಕ ನರಮುಂಡಿಗೆ, ಪರಮೇಶ್ವರ ನಾಯ್ಕ, ಡಿ.ಜಿ.ಭಟ್ಟ ಮುತ್ತಿಗೆ, ಭಾಸ್ಕರ ಹೆಗಡೆ ಕೊಡ್ಗಿಬೈಲ್, ಲಕ್ಷ್ಮೀನಾರಾಯಣ ಹೆಗಡೆ ಬಾಳೆಕುಳಿ, ಮುಖ್ಯಕಾರ್ಯನಿರ್ವಾಹಕ ಪ್ರಸನ್ನ ಹೆಗಡೆ ಶಿಬಳಿ ಉಪಸ್ಥಿತರಿದ್ದರು.