ಜಿಲ್ಲೆ

ಬಿದರಿ ಸಾಂಸ್ಕೃತಿಕ ವೇದಿಕೆಯಿಂದ ನ. 5ರಂದು ಬಿದರಿ ಉತ್ಸವ

ಬೀದರ್‌: ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಇದೇ ನವೆಂಬರ್‌ 5ರಂದು ಭಾನುವಾರ ಬಿದರಿ, ಬೀದರ್‌ ಜಿಲ್ಲೆಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಬಿದರಿ ಉತ್ಸವ 2023ರ ಅಂಗವಾಗಿ ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿಯನ್ನು ಖ್ಯಾತ ಹಿನ್ನಲೆ ಗಾಯಕಿ ಲತಾ ಹಂಸಲೇಖಾ ಅವರಿಗೆ ನೀಡಲು ನಿರ್ಧರಿಸಿ ಆಹ್ವಾನಿಸಲಾಗಿದ್ದು ಅಂದು ಸಂಜೆ ಖ್ಯಾತ ಗಾಯಕರಿಂದ ನೇರ ವಾದ್ಯ ಸಂಯೋಜನೆಯೊಂದಿಗೆ ಸಂಗೀತೋತ್ಸವ ನಡೆಯಲಿದೆ.

ಈ ಕುರಿತಂತೆ ಬಿದರಿ ವೇದಿಕೆಯು ಸೋಮವಾರ ಸಂಜೆ ಸಭೆ ನಡೆಸಿ ತಿಳಿಸಿದ್ದು, ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖಾ ಅವರ ಪತ್ನಿ ಲತಾ ಹಂಸಲೇಖಾ ಅವರು ಹಲವಾರು ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಧ್ವನಿ ನೀಡಿದ್ದು ಸಂಗೀತ ಲೋಕದಲ್ಲಿ ಖ್ಯಾತನಾಮರಾಗಿದ್ದಾರೆ. ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿ ಈ ಬಾರಿ ಅವರಿಗೆ ನೀಡಲು ನಿರ್ಧರಿಸಿ ಅವರನ್ನು ಆಹ್ವಾನಿಸಿದ್ದು ಅದಕ್ಕೆ ಅವರು ಬರಲು ಒಪ್ಪಿದ್ದಾರೆ ಎಂದು ವೇದಿಕೆಯ ಅಧ್ಯಕ್ಷೆ ರೇಖಾ ಸೌದಿ ತಿಳಿಸಿದರು.

ನವೆಂಬರ್‌ 5ರಂದು ಸಂಜೆ 4ಗಂಟೆಗೆ ಖ್ಯಾತ ಹಿನ್ನೆಲೆ ಗಾಯಕಿ ಲತಾ ಹಂಸಲೇಖಾ ಅವರಿಗೆ ಕೊಡಮಾಡುವ ಬಿದರಿ ದತ್ತಿ ಪ್ರಶಸ್ತಿಯ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಬಸವಲಿಂಗ ಪಟ್ಟದ್ದೇವರು ವಹಿಸಿದರೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಪೌರಾಡಳಿತ ಸಚಿವ ರಹೀಮ್‌ ಖಾನ್‌, ಶಾಸಕರಾದ ಪ್ರಭು ಚವ್ಹಾಣ್‌, ಶರಣು ಸಲಗರ, ಅರವಿಂದಕುಮಾರ ಅರಳಿ, ರಘುನಾಥರಾವ್‌ ಮಲ್ಕಾಪೂರೆ, ಮಾಜಿ ಸಚಿವ ರಾಜಶೇಖರ ಪಾಟೀಲ್‌, ಮಾಜಿ ಶಾಸಕ ವಿಜಯಸಿಂಗ್‌, ಜಿ.ಕೆ ಕನ್ಸಟ್ರಕ್ಷನ್ಸ್‌ ಸಂಸ್ಥಾಪಕ ಅಧ್ಯಕ್ಷರಾದ ಗುರುನಾಥ ಕೊಳ್ಳೂರ್‌, ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ಶಾಹೀನ್‌ ಶಿಕ್ಷಣ ಸಂಸ್ಥೆಯ ಅಬ್ದುಲ್‌ ಖದೀರ್‌, ಡಾ. ಎಸ್‌ಎಸ್‌ ಸಿದ್ದಾರೆಡ್ಡಿ ಫೌಂಡೇಶನ್‌ ಅಧ್ಯಕ್ಷರಾದ ಡಾ. ಗುರಮ್ಮ ಸಿದ್ದಾರೆಡ್ಡಿ ಪಾಲ್ಗೊಳ್ಳಲಿದ್ದು, ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ, ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್‌ ಅವರು ಆಗಮಿಸಲಿದ್ದಾರೆ.

ಅಂದು ಸಂಜೆ 6.30ಕ್ಕೆ ಬಿದರಿ ಸಂಗೀತೋತ್ಸವ ಆಯೋಜಿಸಲಾಗಿದ್ದು ಸರಿಗಮಪ ಖ್ಯಾತಿಯ ಗಾಯಕ ಹರ್ಷಧ್ವನಿ ಶ್ರೀಹರ್ಷ, ರೇಖಾ ಸೌದಿ, ಅಮಿತ್‌ ಜನವಾಡಕರ್‌, ಶ್ರೀನಾಥ ಕಮಲಾಪೂರಕರ್‌, ರಾಜೇಶ ಕುಲಕರ್ಣಿ, ವಿಷ್ಣು ಸೇರಿದಂತೆ ಮತ್ತಿತರ ಗಾಯಕರು ಹಾಗೂ ಮೈಸೂರಿನ ಧ್ರುವ್‌ ಅವರ ವಾದ್ಯ ತಂಡ ರಸದೌತಣ ನೀಡಲಿದ್ದು ಇದನ್ನು ಕನ್ನಡಪ್ರಭ ಕಾರ್ಯನಿರ್ವಾಹಕ ಸಂಪಾದಕರ ರವಿಶಂಕರ ಭಟ್‌ ಉದ್ಘಾಟಿಸಲಿದ್ದು, ಖ್ಯಾತ ಗಾಯಕಿ ನಾಗಚಂದ್ರಿಕಾ ಭಟ್‌, ಶಾಸಕ ಡಾ. ಸಿದ್ದು ಪಾಟೀಲ್‌, ಜ್ಞಾನಸುಧಾ ವಿದ್ಯಾಲಯದ ಅಧ್ಯಕ್ಷೆ ಡಾ. ಪೂರ್ಣಿಮಾ ಜಾರ್ಜ್‌, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಸರ್ಕಾರಿ ನೌಕರರ ಸಂಘಧ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಭಾರತಿ ವಸ್ತ್ರದ, ಶಿವಾನಂದ ಪಾಟೀಲ್‌, ಮಡಿವಾಳಪ್ಪ ಮಂಗಲಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿರಲಿದ್ದಾರೆ.

ನ. 4ರಂದು ಬಿದರಿ ಕ್ರೀಡೋತ್ಸವ

ಬಿದರಿ ಕ್ರೀಡೋತ್ಸವವನ್ನು ನವೆಂಬರ್‌ 4ರಂದು ತಾಲೂಕಿನ ಗೋಡಂಪಳ್ಳಿ ಗ್ರಾಮದ ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಯುವ ಸಬಲೀಕರ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಕರ್ನಾಟಕ ವಸತಿ ಶಿಕ್ಷಣ 29 ಶಾಲೆಗಳ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ವಸತಿ ಶಿಕ್ಷಣ ಸ. ಸಂಘದ ಸಹಕಾರದಲ್ಲಿ ಆಯೋಜಿಸಲಾಗಿದೆ.