ಸಂತೋಷ ಮುರಡಿ ಮುಂಡರಗಿ
ಬಿದರಳ್ಳಿ ಗ್ರಾಮದ ಮಕ್ಕಳು ಶಾಲೆಗೆ ಹೋಗಲು ನಿತ್ಯವೂ ಪರದಾಟಬೇಕಿದೆ. ಬಸ್ ಸೌಕರ್ಯವಿರದೆ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದರೂ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.
ತಾಲೂಕಿನ ಬಿದರಳ್ಳಿ ಗ್ರಾಮವು ಹಮ್ಮಿಗಿ ಬಳಿಯ ಸಿಂಗಟಾಲೂರ ಏತ ನೀರಾವರಿ ಬ್ಯಾರೇಜ್ ಹಿನ್ನೀರಿನ ಮುಳುಗಡೆ ಪ್ರದೇಶಕ್ಕೆ ಒಳಪಟ್ಟಿದೆ. ಗ್ರಾಮದಿಂದ ಎರಡು ಕಿಮೀ ದೂರದಲ್ಲಿ ಪುನರ್ವಸತಿ ಗ್ರಾಮ ನಿರ್ವಿುಸಲಾಗಿದೆ. ಅಲ್ಲಿ ಈಗಾಗಲೇ ಶಾಲೆ, ಗ್ರಾ.ಪಂ. ಕಚೇರಿ, ಆಯುರ್ವೆದ ಚಿಕಿತ್ಸಾ ಕೇಂದ್ರ ಪ್ರಾರಂಭಿಸಲಾಗಿದೆ. ಹಲವಾರು ಮನೆಗಳೂ ನಿರ್ವಣಗೊಂಡಿವೆ. ಆದರೆ, ಹಳೇ ಗ್ರಾಮ ಸಂಪೂರ್ಣ ಸ್ಥಳಾಂತರವಾಗದ ಕಾರಣ ಬಸ್ಗಳು ಮತ್ತು ಖಾಸಗಿ ವಾಹನಗಳು ಪುನರ್ವಸತಿ ಗ್ರಾಮಕ್ಕೆ ಬರುತ್ತಿಲ್ಲ. ಹೀಗಾಗಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳುವ ಮಕ್ಕಳು ಪ್ರತಿ ದಿನ 2 ಕಿಮೀ ನಡೆದುಕೊಂಡು ಹೋಗಬೇಕಾಗಿದೆ.
ಪುನರ್ವಸತಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಿದರಳ್ಳಿ, ತೊಳಲಿ, ಕಲ್ಲಾನೂರ ಗ್ರಾಮದ ಮಕ್ಕಳು ಆಗಮಿಸುತ್ತಾರೆ. ಪ್ರಸಕ್ತ ಸಾಲಿನಲ್ಲಿ 1ರಿಂದ 7ನೇ ತರಗತಿವರೆಗೆ 302 ಮಕ್ಕಳ ನೋಂದಣಿ ಇದೆ. ಕರೊನಾ ಹಿನ್ನೆಲೆಯಲ್ಲಿ ಸದ್ಯ 6 ಮತ್ತು 7ನೇ ತರಗತಿಯ 98 ಮಕ್ಕಳು ಮಾತ್ರ ಶಾಲೆಗೆ ಆಗಮಿಸುತ್ತಿದ್ದಾರೆ. ಸರ್ಕಾರಿ ಬಸ್ಗಳು ಮತ್ತು ಖಾಸಗಿ ವಾಹನಗಳು ಹಳೇ ಬಿದರಳ್ಳಿ ಗ್ರಾಮಕ್ಕೆ ತೆರಳುತ್ತಿರುವುದರಿಂದ ಅಲ್ಲಿಂದ ಪುನರ್ವಸತಿ ಗ್ರಾಮದ ಶಾಲೆಗೆ ಮಕ್ಕಳು ನಡೆದುಕೊಂಡು ಬರಬೇಕಾಗಿದೆ. ಗ್ರಾಮ ಪಂಚಾಯಿತಿ, ಆಯುರ್ವೆದ ಚಿಕಿತ್ಸಾ ಕೇಂದ್ರಕ್ಕೆ ತೆರಳಲು ಸಾರ್ವಜನಿಕರೂ ತೊಂದರೆ ಅನುಭವಿಸಬೇಕಾಗಿದೆ.
ಹಳೇ ಗ್ರಾಮದಲ್ಲಿದ್ದ ಶಾಲೆಯನ್ನು 2018ರಲ್ಲಿ ಪುನರ್ವಸತಿ ಗ್ರಾಮಕ್ಕೆ ಸ್ಥಳಾಂತರಿಸಲಾಯಿತು. ಹಳೇ ಗ್ರಾಮಕ್ಕೆ ಮಾತ್ರ ಬಸ್ ಸೌಕರ್ಯ ಇರುವುದರಿಂದ ಮಕ್ಕಳು 2 ಕಿ.ಮೀ. ನಡೆದುಕೊಂಡು ಬರುವುದಕ್ಕೆ ತೊಂದರೆಯಾಗಿದೆ. ಪುನರ್ವಸತಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿದರೆ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. | ಬಿ.ಎಂ. ಸಜ್ಜನರ ಬಿದರಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ
ಶಾಲೆ, ಗ್ರಾಪಂ ಕಾರ್ಯಾಲಯಕ್ಕೆ ತೆರಳಲು ತೊಂದರೆಯಾಗುತ್ತಿದೆ. ಆದ್ದರಿಂದ ಪುನರ್ವಸತಿ ಗ್ರಾಮಕ್ಕೆ ಬೆಳಗ್ಗೆ ಮತ್ತು ಸಂಜೆ ಶಾಲೆ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಬೇಕು. | ನಾಗರಾಜ ಮತ್ತೂರ ಉಮೇಶ ಬಾಳಿಕಾಯಿ, ಬಿದರಳ್ಳಿ ಗ್ರಾಮಸ್ಥರು
ಬಿದರಳ್ಳಿ ಹಳೇ ಗ್ರಾಮಕ್ಕೆ ಅಥವಾ ಪುನರ್ವಸತಿ ಗ್ರಾಮಕ್ಕೆ ಎರಡರಲ್ಲೊಂದು ಕಡೆ ಬಸ್ ಸೌಲಭ್ಯ ನೀಡಲಾಗುತ್ತದೆ. ಸದ್ಯ ಹಳೇ ಗ್ರಾಮಕ್ಕೆ ಬಸ್ ಬಿಡಲಾಗುತ್ತಿದೆ. ಪುನರ್ವಸತಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವ ಕುರಿತಂತೆ ಬಿದರಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಬಸ್ ಸಂಚಾರದ ಕುರಿತು ಸರ್ವೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. | ವಿಜಯಕುಮಾರ ಕುಮಟಳ್ಳಿ ಕೆಎಸ್ಆರ್ಟಿಸಿ ಡಿಪೋ ವ್ಯವಸ್ಥಾಪಕ ಮುಂಡರಗಿ