ಹೊಸನಗರ: ತಾಲೂಕಿನ ಐತಿಹಾಸಿಕ ಬಿದನೂರು ಕೋಟೆ ಒಳಭಾಗದಲ್ಲಿರುವ ಕೊಳದ ದಂಡೆ ಭಾನುವಾರ ಕುಸಿದಿದೆ. ಕೋಟೆಯ ಮಹಾದ್ವಾರದಿಂದ ಒಳಗೆ ತೆರಳಿ ರಾಜದರ್ಬಾರ್ ಅಂಗಳಕ್ಕೆ ಹೋಗುವಾಗ ಬಲಭಾಗದಲ್ಲಿ ಎರಡು ಕೊಳಗಳಿದ್ದು, ಒಂದು ಕೊಳದ ದಂಡೆ ಕುಸಿದಿದೆ.
ಬಹಳ ವರ್ಷಗಳ ಹಿಂದೆ ಕುಸಿತವಾಗಿದ್ದ ಕೊಳದ ದಂಡೆಯನ್ನು ಕೆಂಪುಕಲ್ಲುಗಳಿಂದ ಅದೇ ಮಾದರಿಯಲ್ಲಿ ನಿರ್ಮಿಸಲಾಗಿತ್ತು. ಈಗ ಅದೇ ದಂಡೆ ಮತ್ತೆ ಕುಸಿದಿದೆ. ಕೊಳದ ಅಕ್ಕಪಕ್ಕ, ಕೊಳದ ದಂಡೆಯ ಮೇಲೆ ಆಗಿಂದಾಗ್ಗೆ ಗಿಡಗಂಟಿ ಬೆಳೆಯುತ್ತಿವೆ. ಸೂಕ್ತ ನಿರ್ವಹಣೆ ಮಾಡದ ಕಾರಣ ಕುಸಿತವಾಗಿದೆ.
ಕೊಳಗಳು ಮಾತ್ರವಲ್ಲ ಕೋಟೆಯ ಬೃಹತ್ ಗೋಡೆಗಳ ಮೇಲೂ ಗಿಡಗಳು ಬೆಳೆದಿರುವ ಕಾರಣ ಅಲ್ಲಲ್ಲಿ ಗೋಡೆಗಳಿಗೂ ಹಾನಿಯಾಗಿದೆ. ಸಂಕರ‌್ಷಣೆಗೆ ಕ್ರಮ ಕೈಗೊಳ್ಳಬೇಕಾದ ಕೇಂದ್ರ ಪುರಾತತ್ವ ಇಲಾಖೆ ನಿರ್ಲಕ್ಷ ತೋರುತ್ತಿದೆ. ಕುಸಿದಿರುವ ಕೊಳದ ದಂಡೆ ಮತ್ತು ಗೋಡೆಯನ್ನು ಸೂಕ್ತ ತಂತ್ರಜ್ಞಾನ ಬಳಸಿ ಪುರಾತನ ಮಾದರಿಯಲ್ಲೇ ಮರು ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.