ಚಿತ್ರದುರ್ಗ: ಈ ಬಾರಿ ಉತ್ತಮ ಮಳೆ ನಿರೀಕ್ಷೆಯಿದ್ದು, ರಾಜ್ಯದಲ್ಲಿ ಸಂಪೂರ್ಣ ಮುಂಗಾರು ಗುರಿ ತಲುಪುವ ವಿಶ್ವಾಸವಿದೆ ಎಂದು ಕೃಷಿ ಇಲಾಖೆ ನಿರ್ದೇಶಕ ಡಾ.ಜಿ.ಟಿ.ಪುತ್ರ ಹೇಳಿದರು.
ತಾಲೂಕಿನ ಬೀರಾವರ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ, ರೈತ ನಾಗಭೂಷಣ ಅವರ ಹೊಲದಲ್ಲಿ ಮೆಕ್ಕೆಜೋಳ ಬಿತ್ತನೆ ಕಾರ‌್ಯ ವೀಕ್ಷಿಸಿ ಮಾತನಾಡಿದರು.
ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಅಗತ್ಯ ತಾಂತ್ರಿಕತೆ ಸೇವೆಗೆ ಇಲಾಖೆ ಸಜ್ಜಾಗಿದೆ. ಈ ಬಾರಿ ಮುಂಗಾರು ಪೂರ್ವದಲ್ಲಿ ಕಳೆದ 15 ದಿನಗಳಿಂದ ಉತ್ತಮ ಮಳೆಯಾಗಿದ್ದು, ಬೇಸಾಯ ಆರಂಭವಾಗಿದೆ. ಸಹಾಯಧನದೊಂದಿಗೆ ಬಿತ್ತನೆ ಬೀಜ ವಿತರಿಸಲಾಗುತ್ತಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಇಲ್ಲ ಎಂದರು.
ರಾಜ್ಯದಲ್ಲಿ 82.52 ಲಕ್ಷ ಹೆಕ್ಟೇರ್ ಬಿತ್ತನೆ ಹಾಗೂ ಅಂದಾಜು 111 ಲಕ್ಷ ಟನ್ ಆಹಾರ ಧಾನ್ಯಗಳ ಉತ್ಪಾದನೆ ಗುರಿ ಇದೆ. ಮುಂಗಾರು ಹಂಗಾಮಿಗೆ 26 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಗಳ ಲಭ್ಯತೆ ಇದೆ. ಬಿತ್ತನೆ ಬೀಜ ವಾರ್ಷಿಕ 5.50 ಲಕ್ಷ ಕ್ವಿಂಟಾಲ್ ಬೇಡಿಕೆ ಇದ್ದು, ನಾನಾ ಬೆಳೆಗಳ ಅಂದಾಜು 8 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳ ಸಂಗ್ರಹವಿದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಮಾತನಾಡಿ, ಈ ವರ್ಷ ಜಿಲ್ಲೆಯಲ್ಲಿ 3.21 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದೆ. ಶೇಂಗಾ-1.15 ಲಕ್ಷ, ಮುಸುಕಿನ ಜೋಳ-90 ಸಾವಿರ, ರಾಗಿ-50 ಸಾವಿರ, ಸಿರಿಧಾನ್ಯ-22 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಇದೆ. ಮೇ 10ರಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ವಾಡಿಕೆ ಮೀರಿ ಶೇ.60 ಹೆಚ್ಚು ಮಳೆಯಾಗಿದೆ ಎಂದು ಮಾಹಿತಿ ನೀಡಿದರು.
ಕೆಲವೆಡೆ ಪೂರ್ವ ಮುಂಗಾರು ಬಿತ್ತನೆಯಾಗಿದ್ದು, ಹೊಸದುರ್ಗದಲ್ಲಿ ಸಿರಿಧಾನ್ಯ, ಹೆಸರು ಹಾಗೂ ಚಿತ್ರದುರ್ಗ ತಾಲೂಕಿನ ಭರಮಸಾಗರ, ಹಿರೇಗುಂಟನೂರು ಹೋಬಳಿಗಳಲ್ಲಿ ಮುಸುಕಿನ ಜೋಳ ಬಿತ್ತನೆ ನಡೆಯುತ್ತಿದೆ. ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 64 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರಗಳ ಬೇಡಿಕೆ ಇದ್ದು, ಪೂರಕವಾಗಿ ಡಿಎಪಿ 4635 ಮೆಟ್ರಿಕ್ ಟನ್ ದಾಸ್ತಾನಿದೆ ಎಂದರು.
ಕೃಷಿ ಉಪನಿರ್ದೇಶಕರಾದ ಕೆ.ಎಸ್.ಶಿವ ಕುಮಾರ್, ಬಿ.ಎನ್.ಪ್ರಭಾಕರ್, ಕೃಷಿ ಸಹಾಯಕ ನಿರ್ದೇಶಕ ಎನ್.ಚಂದ್ರಕುಮಾರ್,ಹಿರೇಗುಂಟನೂರು ಹೋಬಳಿ ಕೃಷಿ ಅಧಿಕಾರಿ ಕೆ.ಎನ್.ಧನ್‌ರಾಜ್ ಮತ್ತಿತರರು ಇದ್ದರು.
*ಪರಿಶೀಲನೆ:
ಚಿತ್ರದುರ್ಗದ ಉಗ್ರಾಣಕ್ಕೆ ನಿರ್ದೇಶಕರು ಭೇಟಿ ನೀಡಿ, ಬಿತ್ತನೆ ಬೀಜಗಳ ದಾಸ್ತಾನು ಹಾಗೂ ವಿತರಣೆಯ ಸಿದ್ಧತೆ,ಕೃಷಿ ಪರಿಕರಗಳಿಗೆ ಸಂಬಂ ಸಿದಂತೆ ಪರಿಶೀಲನೆ ನಡೆಸಿದರು.