?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಬಿತ್ತನೆ ಕಾರ್ಯಕ್ಕೆ ಭೂಮಿ ಹದಗೊಳಿಸುತ್ತಿರುವ ರೈತರು

ಹನೂರು: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಆಗಾಗ್ಗೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನುಗಳತ್ತ ಮುಖ ಮಾಡಿದ್ದು, ಭೂಮಿಯನ್ನು ಹದಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ.

ತಾಲೂಕಿನಲ್ಲಿನ ಬಹುತೇಕ ರೈತರು ಖುಷ್ಕಿ ಭೂಮಿ ಹೊಂದಿದ್ದು, ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಾರೆ. ಕೆಲವು ವರ್ಷಕ್ಕೆ 2 ಬೆಳೆಯನ್ನು ಬೆಳೆದರೆ, ಇನ್ನು ಕೆಲವರು ಒಂದೇ ಫಸಲನ್ನು ನಂಬಿಕೊಂಡಿದ್ದಾರೆ. ಇಲ್ಲಿ ಹೆಚ್ಚಾಗಿ ಮುಸುಕಿನ ಜೋಳ, ರಾಗಿ, ಸಜ್ಜೆ ಹಾಗೂ ಇನ್ನಿತರ ಮಳೆಯಾಶ್ರಿತ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಮುಂಗಾರು ಹಾಗೂ ಹಿಂಗಾರು ಮಳೆ ಆರಂಭದಲ್ಲಿ ಬಿತ್ತನೆ ಕಾರ್ಯ ಆರಂಭಿಸುತ್ತಾರೆ. ಕಳೆದ ವರ್ಷ ಆರಂಭದಲ್ಲಿ ಉತ್ತಮ ಮಳೆಯಾಗಿತ್ತು. ಈ ವೇಳೆ ಹೆಚ್ಚಿನ ರೈತರು ರಾಗಿ ಹಾಗೂ ಮುಸುಕಿನ ಜೋಳ ಬಿತ್ತನೆ ಮಾಡಿದ್ದು, ಪೈರುಗಳು ಉತ್ತಮವಾಗಿ ಬಂದಿತ್ತು. ಆದರೆ ಒಂದು ತಿಂಗಳ ಕಾಲ ಮಳೆಯಾಗದ ಹಿನ್ನೆಲೆಯಲ್ಲಿ ಕೆಲ ಜಮೀನುಗಳಲ್ಲಿ ಪೈರುಗಳು ಬಿಸಿಲಿನ ತಾಪಕ್ಕೆ ಸೊರಗಿದ್ದವು. ಬಳಿಕ ಆಗಾಗ್ಗೆ ಮಳೆಯಾದ ಕಾರಣ ಫಸಲು ತಕ್ಕಮಟ್ಟಿಗೆ ರೈತರ ಕೈ ಸೇರಿತ್ತು. ಕಟಾವು ಮುಗಿದ ಬಳಿಕ ಜಮೀನನ್ನು ಪಾಳು ಬಿಡಲಾಗಿತ್ತು.

ಆದರೆ ಇದೀಗ ಕಳೆದ ಒಂದು ವಾರದಿಂದ ಆಗಾಗ್ಗೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಲೊಕ್ಕನಹಳ್ಳಿ ಭಾಗದಲ್ಲಿ ಈಗಾಗಲೇ ಬಹುತೇಕ ರೈತರು ಜಮೀನನ್ನು ಉಳುಮೆ ಮಾಡಿ ಎಳ್ಳು, ಸಜ್ಜೆ ಹಾಗೂ ಉದ್ದು ಬಿತ್ತನೆ ಕಾರ್ಯಕ್ಕೆ ಅಣಿಯಾಗುತ್ತಿದ್ದಾರೆ. ಹಾಗೆಯೇ ಹನೂರು ಹೋಬಳಿ ವ್ಯಾಪ್ತಿಯಲ್ಲಿ ರೈತರು ಜಮೀನುಗಳತ್ತ ಮುಖ ಮಾಡಿದ್ದು, ಹದಗೊಳಿಸುವ ಕಾರ್ಯದತ್ತ ಮುಂದಾಗಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಭೂಮಿ ಹದಗೊಳಿಸುವಿಕೆಗೆ ರೈತರು ಚಿಂತನೆ ನಡೆಸಿದ್ದಾರೆ. ಒಟ್ಟಿನಲ್ಲಿ ಬೀಳುತ್ತಿರುವ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಕೃಷಿ ಚಟುವಟಿಕೆ ಗರಿಗೆದರಲು ಉತ್ತೇಜನ ನೀಡಿದಂತಿದೆ.

ಉತ್ತಮ ಮಳೆ: ಕಳೆದ ಒಂದು ವಾರದಿಂದೀಚೆಗೆ ತಾಲೂಕಿನಾದ್ಯಂತ ಮಳೆಯಾಗುತ್ತಿದ್ದು, ಈವರೆಗೂ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ತಂಪು ಅನುಭವ ನೀಡಿತ್ತು. ಶುಕ್ರವಾರ ರಾತ್ರಿ ಮಲೆ ಮಹದೇಶ್ವರಬೆಟ್ಟ, ಹನೂರು ಪಟ್ಟಣ ಸೇರಿದಂತೆ ಹೂಗ್ಯಂ, ಒಡೆಯರಪಾಳ್ಯ, ಪಿ.ಜಿ.ಪಾಳ್ಯ, ಲೊಕ್ಕನಹಳ್ಳಿ, ಶಾಗ್ಯ, ಬಂಡಳ್ಳಿ ಹಾಗೂ ತಾಲೂಕಿನ ವಿವಿಧೆಡೆಯಲ್ಲಿ ಉತ್ತಮ ಮಳೆಯಾಗಿದ್ದು, ಕ್ಷೀಣಿಸಿದ್ದ ಅಂತರ್ಜಲ ಮಟ್ಟ ಕೊಂಚ ಸುಧಾರಿಸುವತ್ತ ಸಾಗಿದೆ. ಇದರಿಂದ ರೈತಾಪಿ ವರ್ಗದಲ್ಲಿ ಸಂತಸ ಮನೆಮಾಡಿದೆ. ಇನ್ನು ತಾಲೂಕಿನ ಹೂಗ್ಯಂ, ಯರಂಬಾಡಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಗೆ ಹಲವರಿಗೆ ಸೇರಿದ ಬಾಳೆ ಫಸಲು ನಾಶವಾಗಿದ್ದರೆ, ಶಾಗ್ಯ ಗ್ರಾಮದಲ್ಲಿ ಸಿಡಿಲಿಗೆ ಮನೆಯೊಂದು ಹಾನಿಯಾಗಿದೆ. ಜೋರು ಮಳೆ ಸುರಿದ ಪರಿಣಾಮ ಹನೂರಿನ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೀರು ನಿಲ್ಲುವಂತಾಯಿತು. ಸದ್ಯ ಶಾಲೆಗೆ ರಜೆ ಇರುವ ಕಾರಣ ಯಾವುದೇ ಸಮಸ್ಯೆಯಾಗಲಿಲ್ಲ.