ರಟ್ಟಿಹಳ್ಳಿ: ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಕುಡಿಯುವ ನೀರು, ಮೂಲಸೌಕರ್ಯ, ವಸತಿ ಯೋಜನೆಗೆ ಅನುದಾನ ಮಂಜೂರು ಮಾಡುವುದು ಹಾಗೂ ವಿವಿಧ ವಿವಿಧ ಬೇಡಿಕೆ ಈಡೇರಿಕೆಗಾಗಿ ಉತ್ತರ ಕರ್ನಾಟಕ ರೈತ ಸಂಘ ಹಾಗೂ ಹುಲತ್ತಿ ಗ್ರಾಮಸ್ಥರು ಗ್ರಾ.ಪಂ. ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ಇಒ ಕೆ.ಸಿ. ಮೋಹನಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ ಮಾತನಾಡಿ, ಸರ್ಕಾರದಿಂದ ಮಂಜೂರಾದ ಅಂಬೇಡ್ಕರ್, ಬಸವ, ಇಂದಿರಾ ಗಾಂಧಿ ವಸತಿ ಯೋಜನೆಯಡಿ 2016-17ನೇ ಸಾಲಿನಲ್ಲಿ ಮನೆಗಳು ಮಂಜೂರಾಗಿದ್ದು, ಸುಮಾರು 40 ಫಲಾನುಭವಿಗಳು ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಈ ಮನೆಗಳ 1ರಿಂದ 3ನೇ ಹಂತದವರೆಗೆ ಜಿಪಿಎಸ್ ಕಾರ್ಯ ಮುಗಿದಿದ್ದು, ಸರ್ಕಾರದಿಂದ ಈವರೆಗೆ ಹಣ ಮಂಜೂರಾಗಿಲ್ಲ. ಹುಲ್ಲತ್ತಿ ಗ್ರಾಮದಲ್ಲಿ ಕುಡಿಯುವ ನೀರಿನ ಬೋರ್ವೆಲ್ಗಳು ಸಾಕಷ್ಟಿದ್ದರೂ, ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಗ್ರಾಮದ 2ನೇ ವಾರ್ಡ್ನ ನರಸಿಂಹ ದೇವಸ್ಥಾನದಿಂದ ಶಿವಬಸಪ್ಪ ಹಿತ್ತಲಮನಿ ಅವರ ಜಮೀನಿನಲ್ಲಿ ಗ್ರಾ.ಪಂ. ವ್ಯಾಪ್ತಿಯ ಮನೆಗಳಿಗೆ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯಒದಗಿಸಬೇಕು. ಗ್ರಾ.ಪಂ.ನ 14ನೇ ಹಣಕಾಸು ಅನುದಾನದಲ್ಲಿ ಅವ್ಯವಹಾರ ನಡೆದಿದ್ದು, ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು. 15ನೇ ಹಣಕಾಸು ಅನುದಾನವನ್ನು ಕುಡಿಯುವ ನೀರಿನ ಯೋಜನೆಗಾಗಿ ಬಳಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ರಟ್ಟಿಹಳ್ಳಿ ತಾ.ಪಂ. ಕಚೇರಿ ಸಿಬ್ಬಂದಿ ಆಗಮಿಸಿ, ಮನವಿ ಸ್ವೀಕರಿಸಲು ಮುಂದಾದರು. ಗ್ರಾಮಸ್ಥರು ಸ್ಥಳಕ್ಕೆ ತಾ.ಪಂ. ಇಒ ಬರಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು. ಮಧ್ಯಾಹ್ನ 2 ಗಂಟೆಗೆ ಆಗಮಿಸಿದ ಇಒ ಕೆ.ಸಿ. ಮೋಹನಕುಮಾರ ಮನವಿ ಸ್ವೀಕರಿಸಿ, ವಸತಿ ಯೋಜನೆ ಫಲಾನುಭವಿಗಳಿಗೆ ಶೀಘ್ರದಲ್ಲಿಯೇ ಅನುದಾನ ಮಂಜೂರಾಗಲಿದೆ. ಈ ಬಗ್ಗೆ ಈಗಾಗಲೇ ಸಭೆಯಲ್ಲಿ ರ್ಚಚಿಸಲಾಗಿದೆ ಎಂದರು.
ದಿನಗೂಲಿ ನೌಕರ ಬಸಪ್ಪ ಮಾವಿನತೋಪ ಅವರಿಗೆ ಕೂಡಲೇ 5 ತಿಂಗಳ ವೇತನ ನೀಡಲು ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಪಿಡಿಒ ಪರಮೇಶಪ್ಪ ಅವರಿಗೆ ಸೂಚಿಸಿದರು. ಗ್ರಾಮ ಪಂಚಾಯಿತಿಯ 14ನೇ ಹಣಕಾಸಿನ ಅವ್ಯವಹಾರದ ಬಗ್ಗೆ ಸಂಪೂರ್ಣ ತನಿಖೆ ಮಾಡಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ರೈತ ಮುಖಂಡರಾದ ಬಸವರಾವಜ ದೀವಿಗಿಹಳ್ಳಿ, ಬಸಪ್ಪ ಹಾರೋಗೊಪ್ಪದ, ನಾಗನಗೌಡ ಪಾಟೀಲ, ಸುರೇಶ ಎರಳ್ಳಿ, ಕಾಳಪ್ಪ ಎರಳ್ಳಿ, ಭೀಮಪ್ಪ ಹಾರೋಗೊಪ್ಪದ, ಬಿ.ಡಿ. ಪಾಟೀಲ, ನಾಗಪ್ಪ ದೀವಿಗಿಹಳ್ಳಿ, ಸೋಮಪ್ಪ ಉಪ್ಪಾರ, ಹನುಮಂತಪ್ಪ ಕರಿಯಣ್ಣನವರ, ಶಂಕ್ರಗೌಡ ಪಾಟೀಲ, ಬಸವರಾಜ ಉಪ್ಪಾರ, ಗ್ರಾಮಸ್ಥರು ಇದ್ದರು.