ಕಲಘಟಗಿ: ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ತಾಲೂಕಿನ ತಂಬೂರ ಗ್ರಾಮದ ಗೌಳಿ ದೊಡ್ಡಿಯ ಬಳಿಯ ಜಮೀನಿನಲ್ಲಿ ಕಾಣಿಸಿದ್ದ ಕಾಡಾನೆ ಹಿಂಡು ಬೇರೆ ಮಾರ್ಗದತ್ತ ಹೆಜ್ಜೆ ಹಾಕಿದ್ದು, ಬಿಡಾರ ಬದಲಾಯಿಸಿವೆ. ಆದರೂ, ಆನೆಗಳನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮುಂದುವರಿಸಿದ್ದಾರೆ.
ಈ ಕುರಿತು ವಿಜಯವಾಣಿಗೆ ಪ್ರತಿಕ್ರಿಯಿಸಿರುವ ತಾಲೂಕು ವಲಯ ಅರಣ್ಯ ಅಧಿಕಾರಿ ಶ್ರೀಕಾಂತ ಪಾಟೀಲ, ‘ಸೋಮವಾರದಿಂದ ಕಾಡಾನೆಗಳು ತಾವು ತಂಗಿದ್ದ ಸ್ಥಳವನ್ನು ಬದಲಾಯಿಸಿವೆ. ಮಂಗಳವಾರ ಆನೆಗಳಿರುವ ಯಾವುದೇ ಕುರುಹು ಲಭ್ಯವಾಗಿಲ್ಲ. ಆದರೂ ನಮ್ಮ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದು, ಸುತ್ತಲಿನ ಗ್ರಾಮಗಳ ಜನರೊಂದಿಗೆ ಮಾಹಿತಿ ಕಲೆಹಾಕುತ್ತಿದ್ದಾರೆ’ ಎಂದರು.
ಆನೆಗಳಿಗೆ ಆಹಾರದ ಕೊರತೆ: ಕಳೆದ ವರ್ಷವೂ ಕಾಡಂಚಿನ ಗ್ರಾಮಗಳಲ್ಲಿ ಪ್ರತ್ಯಕ್ಷವಾಗಿದ್ದ ಆನೆಗಳು, ಕೆಲದಿನ ಮಾತ್ರ ಇದ್ದು ನಂತರ ಅರಣ್ಯಕ್ಕೆ ಮರಳಿದ್ದವು. ಈ ವರ್ಷ ಪದೇಪದೆ ಕಾಣಿಸುತ್ತಿವೆ. ಅರಣ್ಯದಲ್ಲಿ ಅವುಗಳಿಗೆ ಕುಡಿಯಲು ನೀರಿದೆ. ಆದರೆ, ಆಹಾರದ ಕೊರತೆಯಿಂದಾಗಿ ಕಬ್ಬು, ಭತ್ತ, ಗೋವಿನಜೋಳ ಬೆಳೆಗಳನ್ನು ತಿನ್ನಲು ಬರುವುದನ್ನು ರೂಢಿ ಯಾಗಿಸಿಕೊಂಡಿವೆ. ಏನೇ ಆಗಲಿ ಕಾಡಾನೆಗಳ ಹಾವಳಿಂದಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿದ್ದರೆ, ರೈತರಿಗೆ, ಕೂಲಿಕಾರ್ವಿುಕರಿಗೆ ತಮ್ಮ ಹಾಗೂ ಬೆಳೆಯ ರಕ್ಷಣೆಯೇ ಬಹುದೊಡ್ಡ ಸವಾಲಾಗಿದೆ.