ಬೇಲೂರು: ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ, ಅಧಿಕಾರಿ ಮತ್ತು ಸಿಬ್ಬಂದಿ ಮಂಗಳವಾರ ಬಿಡಾಡಿ ದನಗಳನ್ನು ವಶಕ್ಕೆ ಪಡೆದು, ಮಾಲೀಕರಿಗೆ ದಂಡ ವಿಧಿಸಿದರು.
ಬೇಲೂರಿನಲ್ಲಿ ಸಾರ್ವಜನಿಕರು, ಪ್ರವಾಸಿಗರಿಗೆ ಬಿಡಾಡಿ ದನಗಳ ಉಪಟಳದ ಬಗ್ಗೆ ವಿಜಯವಾಣಿಯಲ್ಲಿ ಸೋಮವಾರ ‘ಬೇಲೂರು ಪಟ್ಟಣದಲ್ಲಿ ಬಿಡಾಡಿ ದನಗಳ ಉಪಟಳ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿದ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ, ಪಟ್ಟಣದ ಮುಖ್ಯರಸ್ತೆಯ ಇಕ್ಕೆಲ, ತರಕಾರಿ ಮಾರುಕಟ್ಟೆ, ಬಸ್ ನಿಲ್ದಾಣ, ದೇವಸ್ಥಾನ, ಬಸವೇಶ್ವರ ವೃತ್ತ, ಕೆಂಪೇಗೌಡ ವೃತ್ತ ಸೇರಿದಂತೆ ಎಲ್ಲೆಂದರಲ್ಲಿ ಓಡಾಡುತ್ತಿದ್ದ ಬಿಡಾಡಿ ದನಗಳನ್ನು ವಶಕ್ಕೆ ಪಡೆದರು.
ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಮಾತನಾಡಿ, ವಿಜಯವಾಣಿ ಪತ್ರಿಕೆಯಲ್ಲಿ ಬಿಡಾಡಿ ದನಗಳ ಕಿರಿಕಿರಿ ಬಗ್ಗೆ ವರದಿಯ ಹಿನ್ನೆಲೆಯಲ್ಲಿ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಮಂಗಳವಾರ ಬೆಳಗ್ಗೆಯಿಂದಲೇ ಬಿಡಾಡಿ ದನಗಳನ್ನು ವಶಕ್ಕೆ ಪಡೆಯಲು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು, ಅವುಗಳನ್ನು ಗೋ ಶಾಲೆಗೆ ಕಳಿಸಲು ಎಲ್ಲ ರೀತಿಯ ಪೂರ್ವ ಸಿದ್ಧತೆ ಕೈಗೊಳ್ಳಲಾಗಿತ್ತು. ಆದರೆ ದನಗಳ ಮಾಲೀಕರು ಪುರಸಭೆಗೆ ಆಗಮಿಸಿ ಮುಂದಿನ ದಿನಗಳಲ್ಲಿ ದನಗಳನ್ನು ರಸ್ತೆಗೆ ಬಿಡುವುದಿಲ್ಲ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಒಂದು ಬಾರಿ ಅವರಿಗೆ ಅವಕಾಶ ಮಾಡಿ ಕೊಟ್ಟು ಮಾಲೀಕರಿಗೆ ದಂಡ ವಿಧಿಸಿ ದನ ಕರಗಳನ್ನು ವಾಪಸ್ ಕೊಟ್ಟು ಕಳುಹಿಸಲಾಗಿದೆ. ಮತ್ತೊಮ್ಮೆ ಇದು ಮರುಕಳಿಸಿದರೆ ಯಾವುದೇ ಮುಲಾಜಿಗೂ ಒಳಗಾಗದೆ ಎಲ್ಲ ದನ ಕರುಗಳನ್ನು ಗೋ ಶಾಲೆಗೆ ಕಳುಹಿಸಲಾಗುವುದು ಎಂದರು.
ಪುರಸಭೆ ಮುಖ್ಯಾಧಿಕಾರಿ ಎಸ್.ಡಿ.ಮಂಜುನಾಥ್ ಮಾತನಾಡಿ, ಮಂಗಳವಾರ ಬೆಳಗ್ಗೆಯೇ ಬಿಡಾಡಿ ದನಗಳನ್ನು ವಶಕ್ಕೆ ಪಡೆದು, ಮಾಲೀಕರಿಗೆ ಒಟ್ಟು 7 ಸಾವಿರ ರೂ. ದಂಡ ವಿಧಿಸಿ ವಾಪಸ್ ಕೊಟ್ಟಿದ್ದೇವೆ. ಜತೆಗೆ ಬೀದಿ ಬದಿಯಲ್ಲಿ ತಿಂಡಿ ಗಾಡಿಗಳವರು ಉಳಿದ ತಿಂಡಿ, ತರಕಾರಿ, ಮಾರುಕಟ್ಟೆಯಲ್ಲಿ ಕೊಳೆತ ತರಕಾರಿಗಳನ್ನು ದನ ಕರುಗಳಿಗೆ ಹಾಕುತ್ತಿದ್ದರು. ಈ ಆಹಾರ ಸಿಗುತ್ತದೆ ಎಂದು ದನಗಳು ಅಲ್ಲೇ ಇರುತ್ತಿದ್ದವು. ಆದ್ದರಿಂದ ತಿಂಡಿ ಗಾಡಿ ಮತ್ತು ತರಕಾರಿ ವ್ಯಾಪಾರಿಗಳಿಗೂ ಸೂಚನೆ ನೀಡಿದ್ದು, ಇನ್ನು ಮುಂದೆ ಉಳಿದ ತರಕಾರಿ ಆಹಾರಗಳನ್ನು ಕಸದ ಡಬ್ಬಿಗೆ ಅಥವಾ ಪುರಸಭೆ ಗಾಡಿಗೆ ಹಾಕಬೇಕು, ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದ್ದೇವೆ ಎಂದರು.
ಆರೋಗ್ಯಾಧಿಕಾರಿ ಲೋಹಿತ್, ಕಂದಾಯಾಧಿಕಾರಿ ಪ್ರಸನ್ನ ಹಾಗೂ ಸಿಬ್ಬಂದಿ ಇದ್ದರು.