ಚಿಕ್ಕಬಳ್ಳಾಪುರ : ಕಟ್ಟುನಿಟ್ಟಿನ ಆದೇಶ, ನಿರಂತರ ಕಾರ್ಯಾಚರಣೆ ಮತ್ತು ಜಾಗೃತಿ ಕಾರ್ಯಕ್ರಮಗಳ ನಡುವೆಯೂ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಬಿದ್ದಿಲ್ಲ.
ಹೌದು! ಒಂದೆಡೆ ಪ್ಲಾಸ್ಟಿಕ್ ಬಳಕೆ ನಿಷೇಧದ ವಿರುದ್ಧದ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಮತ್ತೊಂದೆಡೆ ಯಾವುದೇ ಭೀತಿ ಇಲ್ಲದೇ ವ್ಯಾಪಾರಸ್ಥರು ಮತ್ತು ಗ್ರಾಹಕರು ನಿಷೇಧಿತ ವಸ್ತುವನ್ನು ಬಳಸುತ್ತಿರುವ ದೃಶ್ಯಗಳು ಕಂಡು ಬರುತ್ತಿದ್ದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಪ್ಲಾಸ್ಟಿಕ್ ನಿಷೇಧಧ ಸಾಲು ಸಾಲು ಭಾಷಣ ಅಪಹಾಸ್ಯ ಮಾಡುವಂತಾಗಿದೆ.
ಪ್ಲಾಸ್ಟಿಕ್ ಪರಿಸರಕ್ಕೆ ಮಾರಕ. ಇದರ ಬದಲಿಗೆ ಪರಿಸರ ಸ್ನೇಹಿ ಪರ್ಯಾಯ ವಸ್ತುಗಳನ್ನು ಬಳಸಲು ಸಲಹೆ ನೀಡಲಾಗುತ್ತಿದೆ. ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಅಧಿಕಾರಿಗಳ ಬಿರುಸಿನ ಕಾರ್ಯಾಚರಣೆ, ಹಾಗೆಯೇ ಭಿತ್ತಿ ಫಲಕ, ಘೋಷಣೆಗಳೊಂದಿಗೆ ಜಾಥಾ ನಡೆಸುವ ಮೂಲಕ ಅರಿವು ಮೂಡಿಸುವಿಕೆ ಸೇರಿ ಹಲವು ಚಟುವಟಿಕೆ ಜೋರಾಗಿ ನಡೆಯುತ್ತದೆ. ಆದರೂ ದಿನೆ ದಿನೇ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆಯೇ ಹೊರತು ಸಂಪೂರ್ಣವಾಗಿ ಕಡಿವಾಣ ಬಿದ್ದಿಲ್ಲ.
ವಿವಿಧೆಡೆ ಕಾರ್ಯಾಚರಣೆ : ಇತ್ತೀಚೆಗೆ ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಮಾರುಕಟ್ಟೆ, ಬಜಾರ್ ರಸ್ತೆ, ಸಂತೆ ಮೈದಾನ, ಶಿಡ್ಲಘಟ್ಟ ನಗರದ ಬಸ್ ನಿಲ್ದಾಣ, ಅಶೋಕನಗರ, ಚಿಂತಾಮಣಿಯ ಡಬಲ್ ರಸ್ತೆ, ಎಂ.ಜಿ.ರಸ್ತೆ ಸೇರಿ ವಿವಿಧೆಡೆ ನಗರಸಭೆ ಪೌರಾಯುಕ್ತರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು ಅಂಗಡಿ, ಹೋಟೆಲ್, ತಳ್ಳುಗಾಡಿಯ ಜತೆಗೆ ವ್ಯಾಪಾರಸ್ಥರಿಂದ ಕೆ.ಜಿ.ಗಟ್ಟಲೇ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಯಿತು. ಜತೆಗೆ ದಂಡ ವಿಧಿಸಿ, ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದುಪಡಿಸುವ ಎಚ್ಚರಿಕೆ ನೀಡಲಾಯಿತು. ಆದರೆ, ಎಲ್ಲೂ ವ್ಯಾಪಾರಸ್ಥರು ಜಗ್ಗಿಲ್ಲ.
ಕದ್ದು ಮುಚ್ಚಿ ಸಾಗಣೆ, ಮಾರಾಟ : ಬೆಂಗಳೂರು, ಆಂಧ್ರದ ಕೆಲ ಭಾಗಗಳಿಂದ ಪ್ಲಾಸ್ಟಿಕ್ ಅನ್ನು ಕದ್ದು ಮುಚ್ಚಿ ವ್ಯಾಪಾರಸ್ಥರಿಗೆ ಮಾರಲಾಗುತ್ತಿದೆ. ಮಾರುಕಟ್ಟೆ, ಕೋಳಿ, ಕುರಿ ಮೇಕೆ ಮಾಂಸ ಮಾರಾಟ ಅಂಗಡಿ, ಹೋಟೆಲ್ ಹಲವೆಡೆ ಪ್ಲಾಸ್ಟಿಕ್ ಕವರ್‌ನಲ್ಲಿಯೇ ಉತ್ಪನ್ನಗಳನ್ನು ಹಾಕಿಕೊಡಲಾಗುತ್ತಿದೆ. ಈ ಮೊದಲು ಅಧಿಕಾರಿಗಳು ಗ್ರಾಹಕರಿಗೆ ದಂಡ ವಿಧಿಸುತ್ತಿದ್ದ ಹಿನ್ನೆಲೆಯಲ್ಲಿ ಬಟ್ಟೆ, ಬಿದಿರಿನಿಂದ ತಯಾರಿಸಿದ ಬ್ಯಾಗುಗಳನ್ನು ಬಳಸಲಾಗುತ್ತಿತ್ತು. ಆದರೆ, ಈಗ ಮತ್ತೆ ವ್ಯಾಪಕವಾಗಿ ನಿರ್ಲಕ್ಷ್ಯ ಕಂಡು ಬರುತ್ತಿದೆ.
ತ್ಯಾಜ್ಯ ಘಟಕದಲ್ಲಿ ಪ್ಲಾಸ್ಟಿಕ್ : ಮನೆಗಳಿಂದ ಹಸಿ ಮತ್ತು ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಇದರಲ್ಲಿ ಪ್ಲಾಸ್ಟಿಕ್ ಕಂಡು ಬರುತ್ತಿಲ್ಲ. ಆದರೆ, ಬೀದಿಯಲ್ಲಿ ಎಲ್ಲೆಂದರಲ್ಲಿ ಬಿಸಾಡಲಾಗಿರುವ ತ್ಯಾಜ್ಯದ ರಾಶಿಯಲ್ಲಿ ಶೇ.30 ರಷ್ಟು ಪ್ಲಾಸ್ಟಿಕ್ ಕೂಡಿರುತ್ತದೆ. ಇದನ್ನು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕವಾಗಿ ಸಂಸ್ಕರಿಸುವುದೇ ದೊಡ್ಡ ತಲೆ ನೋವಾಗಿ ಪರಿಣಿಮಿಸಿದೆ.