ಬೇಲೂರು: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳಗೆ ತಾಲೂಕಿನಲ್ಲಿ ಕೊಯ್ಲಿಗೆ ಬಂದಿದ್ದ ಭತ್ತ, ರಾಗಿ, ಕಾಫಿ ಬೆಳೆ ನಷ್ಟವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಮಾಂಡೌಸ್ ಚಂಡಮಾರುತದಿಂದ ಕಳೆದೆರಡು ದಿನಗಳಿಂದ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಲ್ಲಿ ಕೊಯ್ಲಿಗೆ ಬಂದಿರುವ ಭತ್ತ, ರಾಗಿ, ಕಾಫಿ ಬೆಳೆಗೆ ಭಾರಿ ಹಾನಿಯಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಭತ್ತ ಫಸಲಂತೂ ಮಳೆ ನೀರಿಗೆ ಕಾಳುಗಳು ನೆಲಕ್ಕೆ ಉದುರಲಾರಂಭಿಸಿದೆ. ಇನ್ನೂ ಮಲೆನಾಡು ಭಾಗಗಳಲ್ಲಿ ಕೊಯ್ಲಿಗೆ ಬಂದಿದ್ದ ಕಾಫಿ ಗಿಡದಲ್ಲೇ ಹಣ್ಣಾಗಿ ನೆಲಕ್ಕುದುರಿ ಮಣ್ಣು ಪಾಲಾಗುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.
ಕಾಳು ಮೆಣಸಿಗೆ ಸೊರಗು ರೋಗ ಕಾಣಿಸಿಕೊಂಡು ಉದುರಿದರೆ, ಅಡಕೆ ಸಹ ಉದುರಲಾರಂಭಿಸಿದೆ ಇದರಿಂದ ಬೆಳೆಗಾರರು ಸಾಕಷ್ಟು ನಷ್ಟ ಅನುಭ ವಿಸುವಂತಾಗಿದೆ. ಹವಾಮಾನ ವೈಪರೀತ್ಯದಿಂದ ಬೆಳೆ ಸಂಪೂರ್ಣ ನಾಶವಾಗುತ್ತಿದೆ. ಗದ್ದೆ ತೋಟಗಳಿಗೆ ನೀರು ಹೆಚ್ಚಾಗಿ ಮತ್ತಷ್ಟು ಬೆಳೆ ನಷ್ಟಕ್ಕೆ ಕಾರಣವಾಗುತ್ತಿದೆ. ಇನ್ನೂ ಕೆಲ ದಿನ ಮಳೆ ಬರುವ ಮುನ್ಸೂಚನೆ ಇರುವುದರಿಂದ ರೈತರು ಮತ್ತಷ್ಟು ಆತಂಕಗೊಂಡಿದ್ದಾರೆ.
ಅಕಾಲಿಕ ಮಳೆಯಿಂದ ನಷ್ಟ ಸಂಭವಿಸಿರುವ ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ.