ಬಾಗಲಕೋಟೆ: ಇಲ್ಲಿನ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಇಂಜಿನಿಯರ್ ಮನ್ಮಥಯ್ಯ ಎಂ. ಸ್ವಾಮಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಇವರ ಸ್ಥಾನಕ್ಕೆ ಡಿ.ಬಸವರಾಜ ಅವರನ್ನು ನಿಯುಕ್ತಗೊಳಿಸಿದೆ.
ಕೃಷ್ಣಾ ಜಲ ಭಾಗ್ಯ ನಿಗಮದ ಆಣೆಕಟ್ಟು ವೃತ್ತದ ಅಧೀಕ್ಷಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಡಿ.ಬಸವರಾಜ ಅವರು ಬಿಟಿಡಿಎ ಮುಖ್ಯ ಇಂಜಿನಿಯರ್ ಹುದ್ದೆಗೆ ನಿಯುಕ್ತಿಗೊಂಡಿದ್ದಾರೆ. ಗುರುವಾರ ಸಂಜೆ ಬಿಟಿಡಿಎ ಕಚೇರಿಗೆ ಆಗಮಿಸಿ ಅಧಿಕಾರ ವಹಿಸಿಕೊಂಡಿದ್ದಾರೆ.
ಬೆಟ್ಟದಷ್ಟು ನಿರೀಕ್ಷೆ:
ಬಾಗಲಕೋಟೆ ನಗರದ ಸಂತ್ರಸ್ತರಿಗೆ ಪುನರ್ ವಸತಿ ಹಾಗೂ ಪುನರ್ ನಿರ್ಮಾಣ ದ ಜವಾಬ್ದಾರಿ ಹೊಣೆ ಮುಖ್ಯ ಇಂಜಿನಿಯರ್ ಮೇಲೆ ಇದೆ. ನವನಗರ ಯೂನಿಟ್ ೧, ಯೂನಿಟ್ 2 ಮೂಲ ಸೌಕರ್ಯ ಒದಗಿಸುವುದರ ಜೊತೆಗೆ ಸದ್ಯ ಬರ ಸಂದರ್ಭದಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸಬೇಕಿದೆ. ಅಲ್ಲದೆ ನವನಗರ ಯೂನಿಟ್- 3 ನಿರ್ಮಾಣ ಪ್ರಗತಿಯಲ್ಲಿದ್ದು, ನಿಗದಿಯ ಸಮಯಕ್ಕೆ ಪೂರ್ಣಗೊಳಿಸಿ ನಿವೇಶನ ಹಂಚಿಕೆಗೆ ಚಾಲನೆ ನೀಡಬೇಕಿದೆ. ಅಲ್ಲದೆ ಹೆರಕಲ್ ಕುಡಿಯುವ ನೀರಿನ ಯೋಜನೆ ಇದು ವರೆಗೂ ಆರಂಭವಾಗಿಲ್ಲ. ಅದಕ್ಕೆ ಹೊಸ ಸ್ಪರ್ಶ ನೀಡಿ ಶಾಶ್ವತವಾಗಿ ಕುಡಿಯುವ ನೀರು ಒದಗಿಸಬೇಕಿದೆ. ಹೀಗೆ ಹತ್ತು ಹಲವು ಬೆಟ್ಟದಷ್ಟು ನಿರೀಕ್ಷೆ ನೂತನ ಮುಖ್ಯ ಇಂಜಿನಿಯರ್ ಮೇಲೆ ಇದೆ. ಉತ್ತಮ ಕೆಲಸಗಳಿಂದ ಹೆಸರು ವಾಸಿಯಾಗಿರುವ ಡಿ. ಬಸವರಾಜ ಬಾಗಲಕೋಟೆ ಮಾದರಿ ನಗರವನ್ನಾಸುವ ಕನಸು ಸಾಕಾರಗೊಳಲಿ ಎನ್ನುವುದು ಬಾಗಲಕೋಟೆ ಜನರ ಆಗ್ರಹ.