ಮೈಸೂರು: ಬಿಜೆಪಿಯಲ್ಲಿ ಆಗಿರುವ ಅಪಮಾನಗಳ ಕಾರಣದಿಂದಾಗಿ ಹಲವರು ಕಾಂಗ್ರೆಸ್‌ನತ್ತ ಪಕ್ಷದ ಸಿದ್ಧಾಂತ ಒಪ್ಪಿ ಬರುತ್ತಿದ್ದಾರೆ ಎಂದು ಕೆಪಿಸಿಸಿ ಮುಖ್ಯ ಮಾಧ್ಯಮ ವಕ್ತಾರ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜಾ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಹೀಗಾಗಿ ಆಪರೇಷನ್ ಹಸ್ತ ಮಾಡುವ ಅಗತ್ಯವಿಲ್ಲ. ಆದರೆ, ಬಿಜೆಪಿಯಲ್ಲಿನ ಅರಾಜಕತೆಯಿದ್ದು, ಜನರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಆ ಪಕ್ಷ ವಿಫಲವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಕಾಂಗ್ರೆಸ್ ತನ್ನ ಗ್ಯಾರಂಟಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಆದರೆ, ಬಿಜೆಪಿ ಈ ಹಿಂದೆ ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ತಾನು ನೀಡಿದ್ದ 650 ಭರವಸೆಗಳ ಪೈಕಿ 60 ಆಶ್ವಾಸನೆಯನ್ನೂ ಈಡೇರಿಸಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್‌ಗೆ ಸಾಮಾಜಿಕ ಕಳಕಳಿ ಇದೆ. ಆದ್ದರಿಂದ ಗೃಹಜ್ಯೋತಿ ಯೋಜನೆಯ ಪ್ರಯೋಜನ 1.60 ಕೋಟಿ ಜನರಿಗೆ, ಅನ್ನಭಾಗ್ಯ ಯೋಜನೆಯ ಲಾಭ 1.40 ಕೊಟಿ ಜನರಿಗೆ, ಗೃಹಲಕ್ಷ್ಮೀಯ ಪ್ರಯೋಜನ ಸುಮಾರು 1.60 ಕೋಟಿ ಜನರಿಗೆ ತಲುಪಲಿದೆ. ಹೀಗಾಗಿ ರಾಜ್ಯದ ಒಂದಲ್ಲ ಒಂದು ಕುಟುಂಬ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳ ಲಾಭ ಪಡೆಯುತ್ತಿದೆ ಎಂದು ಹೇಳಿದರು.
ಅಧಿಕಾರಕ್ಕೆ ಬಂದ ಕೆಲವೇ ಸಮಯದಲ್ಲಿ ತಾನು ನೀಡಿದ್ದ ಎಲ್ಲ ಭರವಸೆ ಈಡೇರಿಸಿದ ರಾಜ್ಯವಿದ್ದರೆ ಅದು ಕರ್ನಾಟಕ ಮಾತ್ರ. ಇದರಿಂದಾಗಿ ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಸಂತಸ ಹೊಂದಿದ್ದಾರೆ. ಆದರೆ, ಬಿಜೆಪಿಯವರು ವೃಥಾ ಟೀಕಿಸುತ್ತಿದ್ದಾರೆ. ತಮ್ಮ ಪಕ್ಷದಿಂದ ಮುಖಂಡರನ್ನು ಕಾಂಗ್ರೆಸ್ ಸೆಳೆದುಕೊಳ್ಳುತ್ತಿಯೆಂದು ದೂರುತ್ತಿದ್ದಾರೆ ಎಂದು ಕಿಡಿಕಾರಿದರು.
ಚಂದ್ರಯಾನ-3 ಯೋಜನೆ ಯಶಸ್ಸಿನ ಬಳಿಕ ಬೆಂಗಳೂರಿಗೆ ಪ್ರಧಾನಿ ಭೇಟಿ ನೀಡಿದ್ದ ವೇಳೆ ಬಿಜೆಪಿ ಮುಖಂಡರನ್ನು ಯಾವ ರೀತಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಬಿಜೆಪಿ ರಾಜ್ಯ ಮುಖಂಡರ ಬಗ್ಗೆ ಇರುವ ಗೌರವ ತೋರಿಸುತ್ತದೆ. ಹೀಗಾಗಿಯೇ ಆ ಪಕ್ಷದಿಂದ ಹಲವರು ಕಾಂಗ್ರೆಸ್‌ಗೆ ವಲಸೆ ಬಂದರೂ ಅಚ್ಚರಿಯಿಲ್ಲ ಎಂದರು.