Oplus_16908288 
ಜಿಲ್ಲೆ

ಬಿಜೆಪಿಯಿಂದ ರಸ್ತೆ ಸಂಚಾರ ತಡೆದು ಪ್ರತಿಭಟನೆ

ವಿರಾಜಪೇಟೆ: ರಾಜ್ಯ ಸರ್ಕಾರದ ವೈಪಲ್ಯ, ಭ್ರಷ್ಟಾಚಾರ, ಅಭಿವೃದ್ಧಿ ಶೂನ್ಯತೆ ಮತ್ತು ಕೊಡಗಿನಲ್ಲಿ ತೀರಾ ಹದಗೆಟ್ಟ ರಸ್ತೆಗಳ ದುಸ್ಥಿತಿ, ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಮಾಚಿಮಾಡ ಸುವೀನ್ ಗಣಪತಿ ನೇತೃತ್ವದಲ್ಲಿ ವಿರಾಜಪೇಟೆಯ ಮೂರ್ನಾಡು ರಸ್ತೆ ಜಂಕ್ಷನ್‌ನಲ್ಲಿ ಬಿಜೆಪಿ ವತಿಯಿಂದ ಬುಧವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ, ನಮ್ಮ ಬಿಜೆಪಿ ಸರ್ಕಾರ ಇದ್ದಾಗ ಅಭಿವೃದ್ಧಿಪಡಿಸಿದ ರಸ್ತೆ ಮಾತ್ರ ಇಂದು ಕೆಲವು ಕಡೆ ಉತ್ತಮವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಬಂದು ಎರಡೂವರೆ ವರ್ಷವಾದರೂ ರಸ್ತೆ ಅಭಿವೃದ್ಧಿಯನ್ನು ಮರೆತಿದ್ದು, ವಿರಾಜಪೇಟೆಯಿಂದ ಮಡಿಕೇರಿ ತಲುಪಲು ಒಂದೂವರೆ ಗಂಟೆ ಬೇಕು, ಅಷ್ಟು ಹದಗೆಟ್ಟಿದೆ. ಉಳಿದ ಹೆದ್ದಾರಿ ಗ್ರಾಮಗಳ ರಸ್ತೆಗಳು ತೀರಾ ದುಸ್ಥಿತಿಯಲ್ಲಿವೆ. ಸರ್ಕಾರದಿಂದ ಯಾರು ಬಿಟ್ಟಿ ಭಾಗ್ಯ ಬೇಕೆಂದು ಕೇಳಿಲ್ಲವಾದರೂ ಬಿಟ್ಟಿ ಭಾಗ್ಯಕ್ಕೆ ಹಣ ಒದಗಿಸಲು ಹೋಗಿ ರಾಜ್ಯದ ಅಭಿವೃದ್ಧಿಯೇ ಕುಂಠಿತವಾಗಿದೆ. ಈ ಸರ್ಕಾರ ತೊಲಗಬೇಕು ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬೀನ್ ದೇವಯ್ಯ ಮಾತನಾಡಿ, ಕೊಡಗಿನಲ್ಲಿ ಬಹುತೇಕ ಪ್ರಮುಖ ರಸ್ತೆಗಳನ್ನು ಗುಂಡಿಯಲ್ಲಿಯೇ ಹುಡಕಬೇಕಾದ ಅನಿವಾರ‌್ಯತೆ ಬಂದಿದೆ, ಆ ಪರಿ ರಸ್ತೆ ಹದಗೆಟ್ಟಿದ್ದು ಅಭಿವೃದ್ಧಿ ಶೂನ್ಯವಾಗಿದೆ. ವಿರಾಜಪೇಟೆ ಕ್ಷೇತ್ರದ ಶಾಸಕರೆ ಹೇಳುವಂತೆ ಮಡಿಕೇರಿಗೆ ತಲುಪಲು ಅರ್ಧ ಗಂಟೆ ಮುಂಚಿತವಾಗಿ ಪಯಣಿಸಬೇಕು ಎಂಬ ಮಾತು ವಾಸ್ತವತೆಗೆ ಸಾಕ್ಷಿಯಾಗಿದೆ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಸುವೀನ್ ಗಣಪತಿ, ಮಹಿಳಾ ಪ್ರಮುಖರಾದ ಕಾಂತಿ ಸತೀಶ್, ರೀನಾ ಪ್ರಕಾಶ್ ಮತ್ತಿತರರು ಮಾತನಾಡಿದರು.

ಪ್ರತಿಭಟನೆಯಲ್ಲಿ ಹಿರಿಯ ಮುಖಂಡರಾದ ಪಟ್ರಪಂಡ ನಾಣಯ್ಯ, ಪುರಸಭೆ ಸದಸ್ಯೆ ಜೂನ, ಬಿಜೆಪಿ ಪ್ರಮುಖರಾದ ಅಜಪರುಂಡ ಅನಿಲ್, ಕುಂಬೇರ ಮನು ಕುಮಾರ್, ಪಪಂ ಮಾಜಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ತಾಪಂ ಮಾಜಿ ಸದಸ್ಯ ಬಿ.ಎಂ.ಗಣೇಶ್ ಮತ್ತಿತರ ಪ್ರಮುಖರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.