ಜಿಲ್ಲೆ

ಬಿಜೆಪಿಯಿಂದ ಜನತೆಗೆ ಮೋಸ

Haveri

ಹಿರೇಕೆರೂರ: ಗ್ರಾಪಂ ಚುನಾವಣೆಗಳು ಪಕ್ಷದ ಬುನಾದಿಯಾಗಿದ್ದು, ಕಾರ್ಯಕರ್ತರು ಅವಿರತವಾಗಿ ಶ್ರಮಿಸಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ತಿಳಿಸಿದರು.

ಪಟ್ಟಣದ ಗುರುಭವನದಲ್ಲಿ ಶುಕ್ರವಾರ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಗ್ರಾಪಂ ಚುನಾವಣೆ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಪಕ್ಷವು ಸರ್ವರಿಗೂ ಸಮಪಾಲು ನೀಡುವ ಧ್ಯೇಯದೊಂದಿಗೆ ಸಮಾಜದ ಎಲ್ಲ ವರ್ಗಗಳಿಗೆ ಅವಕಾಶ ಮತ್ತು ಕಾರ್ಯಕ್ರಮಗಳನ್ನು ನೀಡಿದ ಪಕ್ಷವಾಗಿದೆ. ರೈತರಿಗೆ ಬಿಜೆಪಿ ಸರ್ಕಾರ ಅನುಕೂಲ ಮಾಡದೇ ವಿಧೇಯಕಗಳಿಗೆ ತಿದ್ದುಪಡಿ ಮಾಡಿ ರೈತರಿಗೆ, ಬಡಜನತೆಗೆ ಮೋಸ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಜನಪರ ಯೋಜನೆಗಳನ್ನು ತಲುಪಿಸುವ ಕಾರ್ಯ ಮಾಡಿದೆ. ಎಲ್ಲ ಯೋಜನೆಗಳನ್ನು ಜನತೆಗೆ ಮನವರಿಕೆ ಮಾಡುವ ಮೂಲಕ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ಕಾರ್ಯಕರ್ತರು ಪಕ್ಷದ ಸಾಧನೆಗಳನ್ನು ಜನರಿಗೆ ತಿಳಿಸಬೇಕು. ಈ ಮೂಲಕ ಗ್ರಾಮ ಪಂಚಾಯಿತಿ ಮಟ್ಟದಿಂದ ಪಕ್ಷವನ್ನು ಗಟ್ಟಿಗೊಳಿಸಬೇಕು ಎಂದರು. ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಂ.ಎಂ. ಹಿರೇಮಠ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಜಿಪಂ ಸದಸ್ಯರಾದ ಎಸ್.ಕೆ. ಕರಿಯಣ್ಣನವರ, ಪ್ರಕಾಶ ಬನ್ನಿಕೋಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ ಮಡಿವಾಳರ, ಪಿ.ಡಿ. ಬಸನಗೌಡ್ರ ಮುಖಂಡರಾದ ಬಿ.ಎನ್. ಬಣಕಾರ, ಎಸ್.ಬಿ. ತಿಪ್ಪಣ್ಣನವರ, ಸಂಜಯ ಡಾಂಗೆ, ಸುರೇಶ ಮಡಿವಾಳರ, ವಿ.ಎನ್. ಮಡಿವಾಳರ ಇತರರು ಉಪಸ್ಥಿತರಿದ್ದರು.