ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಗೃಹ ಸಚಿವ ಅಮಿತ್ ಷಾ ಹೇಳಿಕೆಯಿಂದ ಉಂಟಾಗಿರುವ ಅಂಬೇಡ್ಕರ್ ಅಭಿಮಾನಿಗಳ ಹಾಗೂ ಸಾರ್ವಜನಿಕರ ಆಕ್ರೋಶವನ್ನು ಶಮನ ಮಾಡಲು ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಸಿದ್ಧಾಂತವನ್ನು ಬಿಜೆಪಿ, ಆರ್ಎಸ್ಎಸ್ನವರು ಮನಸ್ಸಪೂರ್ವಕವಾಗಿ ಒಪ್ಪುತ್ತಾರಾ ಎಂಬುದು ಮೊದಲು ಸ್ಪಷ್ಟವಾಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಾಗಲಿ, ಆರ್ಎಸ್ಎಸ್ನವರಾಗಲಿ ಅಂಬೇಡ್ಕರ್, ಬಸವಣ್ಣನವರ ಸಿದ್ಧಾಂತ ಒಪ್ಪುವುದಿಲ್ಲ. ಬಿಜೆಪಿ, ಆರ್ಎಸ್ಎಸ್ ಕಚೇರಿಯಲ್ಲಿ ಅಂಬೇಡ್ಕರ್ ಫೋಟೋ ಇಲ್ಲ. ಮಾಜಿ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದಾಗ ಬಿಜೆಪಿ,ಆರ್ಎಸ್ಎಸ್ನವರು ಪ್ರತಿಭಟನೆ ಮಾಡಲಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಹಾಗೂ ಅಂಬೇಡ್ಕರ್ ನಡುವೆ ರಾಜಕೀಯ ಭಿನ್ನಾಭಿಪ್ರಾಯವಿತ್ತು. ಅಂಬೇಡ್ಕರ್ ಅವರು ತಮ್ಮದೇ ಪಕ್ಷದಿಂದ ಸ್ಪರ್ಧೆ ಮಾಡಿದ್ದಾಗ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ರಾಜಕೀಯದಲ್ಲಿ ಇದು ಸಾಮಾನ್ಯ. ನಾವು ಗೆಲುವಾಗ ಇನ್ನೊಬ್ಬರು ಸೋಲಬೇಕು. ಅಂಬೇಡ್ಕರ್ ಅವರನ್ನು ಬಿಜೆಪಿ, ಆರ್ಎಸ್ಎಸ್ನವರು ಎಂದಾದರೂ ಗೆಲ್ಲಿಸಿದ್ದಾರಾ ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ಅವರನ್ನು ಕಾರ್ವಿುಕ ಸಚಿವರನ್ನಾಗಿ ಮಾಡಿದ್ದು ಕಾಂಗ್ರೆಸ್. ಅವರಿಗೆ ಎಲ್ಲ ರೀತಿಯ ಗೌರವವನ್ನು ಕೊಟ್ಟಿದ್ದೇವೆ. ಅವರಿಗೆ ಭಾರತ ರತ್ನ ಕೊಡದಿರಲು ಕಾರಣವೇನು ಎಂಬುದು ನನಗೆ ನಿಜವಾಗಿಯೂ ಗೊತ್ತಿಲ್ಲ. ಅದಕ್ಕೆ ರಾಜಕೀಯ ಅಥವಾ ರಾಜಕೀಯೇತರ ಕಾರಣಗಳು ಇರಬಹುದು ಎಂದರು.