ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:ವಕ್ಪ್ ಆಸ್ತಿ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡುತ್ತಿದ್ದು, ಅದಕ್ಕೆಲ್ಲ ನಾನು ಹೆದರುವುದಿಲ್ಲ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಪ್ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಪ್ ಆಸ್ತಿ ತೆರವು ಸಂಬಂಧ ನೋಟಿಸ್ ನೀಡುವ ಪ್ರಕ್ರಿಯೆ ಎಲ್ಲ ಸರ್ಕಾರದಿಂದಲೂ ನಡೆದಿದೆ. ಬಿಜೆಪಿ ಸರ್ಕಾರದಲ್ಲೂ ಕೊಡಲಾಗಿದೆ. ಆದರೆ, ಈಗ ಚುನಾವಣೆ ಲಾಭಕ್ಕಾಗಿ ಬಿಜೆಪಿ ಈ ವಿಚಾರದಲ್ಲಿ ಜನರನ್ನು ತಪ್ಪು ಹಾದಿಗೆ ಎಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ವಕ್ಪ್ ಆಸ್ತಿ ಆಗಲಿ, ಮುಜರಾಯಿ ಆಸ್ತಿ ಆಗಲಿ ಅದು ದೇವರ ಆಸ್ತಿ. ದಾನಿಗಳು ಸಮುದಾಯದ ಹಿತಕ್ಕೆ ನೀಡಿರುವ ಆಸ್ತಿ. ಅದನ್ನು ಉಳಿಸುವುದು ನಮ್ಮ ಕರ್ತವ್ಯ ಆಗಬೇಕು. ಮುಜರಾಯಿ ಆಸ್ತಿ ತೆರವು ಮಾಡಲು ನಾನು ಕೈಜೋಡಿಸುತ್ತೇನೆ. ನ್ಯಾಯಾಲಯದ ಆದೇಶ ದ ಪ್ರಕಾರ ವಕ್ಪ್ ಆಸ್ತಿ ಸಂರಕ್ಷಣೆ ಮಾಡಲಾಗುತ್ತಿದೆ. ಬಿಜೆಪಿಯವರ ಆರೋಪದಂತೆ ಸಿಕ್ಕ ಸಿಕ್ಕ ಜಾಗವನ್ನು ವಕ್ಪ್ ಆಸ್ತಿ ಎಂದು ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟ ಪಡಿಸಿದರು.
ಹುಬ್ಬಳ್ಳಿಗೆ ಆಗಮಿಸಿದ ಜಮೀರ್-ಖಾದ್ರಿ
ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಅಜ್ಜಂ ಪೀರ್ ಖಾದ್ರಿ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ಮಂಗಳವಾರ ಹುಬ್ಬಳ್ಳಿಯಲ್ಲಿ ನೆಲೆಸಿದರು.
ರಾತ್ರಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಖಾದ್ರಿ ಅವರನ್ನು ಅಭಿಮಾನಿಗಳು ಸ್ವಾಗತಿಸಿದರು. ಈಗಾಗಲೇ ನಾಮಪತ್ರ ಹಿಂದಕ್ಕೆ ಪಡೆಯಬಾರದೆಂದು ಅಭಿಮಾನಿಗಳು ಒತ್ತಡ ಹಾಕುತ್ತಿರುವುದರಿಂದ ಖಾದ್ರಿ ನಡೆ ಕುತೂಹಲ ಕೆರಳಿಸಿತ್ತು.
ಖಾದ್ರಿ ಅವರು ಬುಧವಾರ ನಾಮಪತ್ರ ವಾಪಸ್ ಪಡೆದು ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಪಠಾಣ ಪರ ಕೆಲಸ ಮಾಡಲಿದ್ದು ಕಾಂಗ್ರೆಸ್ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.
ಇದೇ ವೇಳೆ ಖಾದ್ರಿ ಅವರು ಸಹ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಮೀರ್ ಅಹಮದ್ ಖಾನ್ ಅವರ ಮಾತಿಗೆ ಒಪ್ಪಿ ಅವರ ಮೇಲೆ ಭರವಸೆ ಇಟ್ಟು ನಾಮಪತ್ರ ವಾಪಸ್ ಪಡೆಯಲಿದ್ದೇನೆ. ಯಾವುದೇ ಷರತ್ತು ಹಾಕಿಲ್ಲ ಎಂದು ಹೇಳಿದರು.
ಧಾರವಾಡ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಅನ್ವರ್ ಬಾಷಾ, ಅಲ್ತಾಫ್ ಕಿತ್ತೂರ್, ಅಲ್ತಾಫ್ ಅಳ್ಳೂರ್, ಅನಿಲಕುಮಾರ್ ಪಾಟೀಲ್ ಇದ್ದರು.