ಜಿಲ್ಲೆ

ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಿರಿ

Chitradurga - Desk - Pranav Kumar

ಚಿತ್ರದುರ್ಗ: ಕೋಮುವಾದಿ ಬಿಜೆಪಿಯನ್ನು ದೇಶದಲ್ಲಿ ಅಧಿಕಾರದ ಚುಕ್ಕಾಣಿಯಿಂದ ಕಿತ್ತೊಗೆಯುವ ಮೂಲಕ ಮತದಾರರು ಕಾಂಗ್ರೆಸ್‌ಗೆ ಆಶೀರ್ವದಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮನವಿ ಮಾಡಿದರು.

ಉಮಾಪತಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಪದಾಧಿಕಾರಿಗಳ, ಮುಖಂಡರ ಸಭೆಯಲ್ಲಿ ಮಾತನಾಡಿದರು.

ದೇಶದಲ್ಲೇ ಈ ಚುನಾವಣೆ ಅತ್ಯಂತ ಪ್ರತಿಷ್ಠೆಯದ್ದಾಗಿದೆ. ಎಸ್ಸಿ, ಎಸ್ಟಿ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳಿಗೆ ಕಳೆದ 10 ವರ್ಷಗಳಿಂದ ಅನ್ಯಾಯ ಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಜಾಗೃತರಾಗಿ. ಕೈ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಎಂದು ಕೋರಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಧರ್ಮ-ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುತ್ತಿರುವ ಪ್ರಧಾನಿ ನರೇಂದ್ರಮೋದಿ, ಬಿಜೆಪಿಯ ಯಾವೊಬ್ಬ ಕಾರ್ಯಕರ್ತನಿಗೂ ಲೋಕಸಭಾ ಚುನಾವಣೆಯಲ್ಲಿ ಮತ ಕೇಳುವ ನೈತಿಕತೆಯಿಲ್ಲ. ನಮ್ಮ ಪಕ್ಷದ ಕಾಯಕರ್ತರು ಪ್ರತಿ ಬೂತ್‌ನ ಮನೆ-ಮನೆಗೆ ತೆರಳಿ ಕಾಂಗ್ರೆಸ್ ಸಾಧನೆ ಮುಂದಿಟ್ಟುಕೊಂಡು ಮತಯಾಚಿಸಿ ಎಂದು ಸಲಹೆ ನೀಡಿದರು.

ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ, ಒಮ್ಮೆ ಕ್ಷೇತ್ರದಲ್ಲಿ ಜನಾಶೀರ್ವಾದದಿಂದ ಗೆದ್ದಿದ್ದೇನೆ. ಮತ್ತೊಮ್ಮೆ ಸೋತರೂ ಬೆನ್ನು ತೋರಿಸಿ ಓಡಿ ಹೋಗಿಲ್ಲ. ಅಭಿವೃದ್ಧಿಗಾಗಿ ನನಗೆ ಇನ್ನೊಮ್ಮೆ ಅವಕಾಶ ಮಾಡಿಕೊಡಿ. ಜಿಲ್ಲೆಯ ಜನರ ಋಣ ತೀರಿಸುತ್ತೇನೆ. ಪಕ್ಷದ ಕಾರ್ಯಕರ್ತರು ಏ. 4ರ ನಾಮಪತ್ರ ಸಲ್ಲಿಕೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಬಂದರೆ ಸಂವಿಧಾನ ಇರುವುದಿಲ್ಲ: ಪ್ರಧಾನಿ ಮೋದಿ ಪೇಪರ್ ಟೈಗರ್ ಆಗಿದ್ದು, ಅವರ ಟೀಕೆಗಳಿಗೆ ಕಾಂಗ್ರೆಸ್ಸಿಗರು ಪ್ರತ್ಯುತ್ತರ ನೀಡುತ್ತಿಲ್ಲ. ಇದೊಮ್ಮೆ ಮಾತ್ರ ಭಾರತದಲ್ಲಿ ಚುನಾವಣೆ ಆಗುತ್ತದೆ. ಮತ್ತೊಮ್ಮೆ ಬಿಜೆಪಿ ಬಂದರೆ ಸಂವಿಧಾನವೇ ಇರುವುದಿಲ್ಲ. ಮನುವಾದ ದಲಿತರನ್ನು ಆಳಲಿದೆ ಎಂದು ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿ.ಎಸ್.ಮಂಜುನಾಥ್ ದೂರಿದರು. ಧರ್ಮ-ಜಾತಿಗಳ ಮಧ್ಯೆ ಭಯೋತ್ಪಾದನೆ ಸೃಷ್ಟಿಯಾಗುತ್ತಿದೆ. ನಮ್ಮ ಮಕ್ಕಳು ಹೆದರುತ್ತಿದ್ದಾರೆ. ಮತ ಯಾರಿಗೆ ಹಾಕಬೇಕೆಂಬ ಗೊಂದಲ ಉಂಟಾಗಿದೆ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ ನಂದಿನಿಗೌಡ, ಮಾಜಿ ಶಾಸಕ ಎ.ವಿ.ಉಮಾಪತಿ, ಮುಖಂಡರಾದ ಭೀಮಸಮುದ್ರ ಜಿ.ಎಸ್.ಮಂಜುನಾಥ್, ಬಿ.ಯೋಗೇಶ್‌ಬಾಬು, ಆರ್.ಕೃಷ್ಣಮೂರ್ತಿ, ಕೆ.ಸಿ.ನಾಗರಾಜ್, ಆರ್.ಕೆ.ಸರ್ದಾರ್, ಹನುಮಲಿ ಷಣ್ಮುಖಪ್ಪ, ನಜ್ಮಾತಾಜ್, ಡಿ.ಟಿ.ವೆಂಕಟೇಶ್, ಎಸ್.ಎನ್.ರವಿಕುಮಾರ್, ಡಿ.ಎನ್.ಮೈಲಾರಪ್ಪ, ಕೆ.ಪಿ.ಸಂಪತ್‌ಕುಮಾರ್, ಬಿ.ಟಿ.ಜಗದೀಶ್, ಆರ್.ಶಿವಣ್ಣ, ಶಶಿಕಲಾ ಸುರೇಶ್‌ಬಾಬು, ಲಕ್ಷ್ಮಿಕಾಂತ್, ಆರ್.ಪ್ರಕಾಶ್, ಬಾಲಕೃಷ್ಣಸ್ವಾಮಿ, ಆರತಿ ಮಹಡಿ ಶಿವಮೂರ್ತಿ ಇತರರಿದ್ದರು.