ಹುಬ್ಬಳ್ಳಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿಯೊಂದಿಗೆ ರಾಜ್ಯ ನಾಲ್ಕು ಸ್ಥಳಗಳಿಂದ ಮಾರ್ಚ್ 1ರಿಂದ ವಿಜಯ ಸಂಕಲ್ಪ ರಥ ಯಾತ್ರೆ ಆಯೋಜಿಸಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 1ರಂದು ಬೆಳಗ್ಗೆ 11 ಗಂಟೆಗೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಿಂದ ಹೊರಡುವ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, 2ರಂದು ಬೆಳಗ್ಗೆ 11 ಗಂಟೆಗೆ ನಂದಗಢದಿಂದ ಹೊರಡುವ ಯಾತ್ರೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್, ಮಾ. 3ರಂದು ಬೆಳಗ್ಗೆ 11 ಗಂಟೆಗೆ ಬೀದರ್ ಜಿಲ್ಲೆ ಬಸವಕಲ್ಯಾಣದಿಂದ ಹೊರಡುವ ಹಾಗೂ ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ದೇವನಹಳ್ಳಿಯಿಂದ ಹೊರಡುವ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ ಷಾ ಚಾಲನೆ ನೀಡುವರು ಎಂದು ವಿವರಿಸಿದರು.
ನಾಲ್ಕು ಸ್ಥಳಗಳಿಂದ ಚಾಲನೆ ಪಡೆಯುವ ರಥ ಯಾತ್ರೆಯು ಮಾ. 25ರಂದು ದಾವಣಗೆರೆಗೆ ಕೊನೆಗೊಳ್ಳಲಿದೆ. ಅಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದು, 8-9 ಲಕ್ಷ ಜನರನ್ನು ಸೇರಿಸಲಿದ್ದೇವೆ ಎಂದರು.