ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ 300 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ವಶಪಡಿಸಿಕೊಂಡಿರುವುದಾಗಿ ಬಹಿರಂಗ ಪಡಿಸಿರುವುದು ಬಿಜೆಪಿಯ ಬಾಲಿಶ ಹಾಗೂ ನಿಷ್ಪ್ರಯೋಜಕ ನಡೆಯಾಗಿದೆ. ಇದು ಬೆಳಗಾವಿಯಲ್ಲಿ ಜ.21ರಂದು ಆಯೋಜಿಸಿರುವ ಗಾಂಧಿ ಭಾರತ ಸಮಾವೇಶದ ಹಿನ್ನೆಲೆಯಲ್ಲಿ ಭಯಭೀತಗೊಂಡಿರುವ ಬಿಜೆಪಿಯ ಪ್ರತಿಕ್ರಿಯೆಯಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದರು. ಇದಕ್ಕೆ ದೇಶದ ಜನರು ಆಕ್ರೋಶಿತರಾಗಿದ್ದಾರೆ. ನಾವು ಆಯೋಜಿಸಿರುವ ಜೈ ಬಾಪು ಜೈ ಭೀಮ ಜೈ ಸಂವಿಧಾನ (ಗಾಂಧಿ ಭಾರತ) ಸಮಾವೇಶದಿಂದ ಬಿಜೆಪಿಗೆ ಹೆದರಿಕೆ ಹುಟ್ಟಿದೆ. ನರೇಂದ್ರ ಮೋದಿ ಪ್ರಧಾನಿಯಾದಾಗಿನಿಂದ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂದರು.
ದೆಹಲಿಯಲ್ಲಿ ಜನಪರ ಆಡಳಿತ ನೀಡುವಲ್ಲಿ ಆಮ್ ಆದ್ಮಿ ಪಕ್ಷ ವಿಫಲವಾಗಿದೆ. ಅವರು ಅಲ್ಲಿ ಒಳ್ಳೆಯ ಕೆಲಸ ಮಾಡಿಲ್ಲ ಎಂದು ನಮಗೆ ಅನಿಸಿದೆ. ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ, ಸ್ಲಮ್ಳ ಸೃಷ್ಟಿಗೆ ಕೇಂದ್ರದ ಬಿಜೆಪಿ ಹಾಗೂ ಅಧಿಕಾರದಲ್ಲಿರುವ ಆಪ್ ಕಾರಣ. ಹಾಗಾಗಿ ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಲೋಕಸಭೆ ಚುನಾವಣೆಯಲ್ಲಿ ಆಪ್ ಜತೆ ಮೈತ್ರಿ ಮಾಡಿಕೊಂಡಿರಬಹುದು. ಆದರೆ, ವಿಧಾನಸಭೆ ಚುನಾವಣೆಗೆ ನಮ್ಮದು ಭಿನ್ನ ನಿಲುವು ಆಗಿದೆ. ಶೀಲಾ ದಿಕ್ಷೀತ್ ಅವರು ದೆಹಲಿಯಲ್ಲಿ 15 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದಾಗ ಉತ್ತಮ ಆಡಳಿತ ನೀಡಿದ್ದರು. ಅವರು ದೆಹಲಿಯ ಪ್ರಗತಿಗೆ ಅಡಿಗಲ್ಲು ಹಾಕಿದ್ದರು ಎಂದರು.
ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ನೇತೃತ್ವ ಯಾರು ವಹಿಸಬೇಕು ಎಂಬುದನ್ನು ಹೈ ಕಮಾಂಡ್ ನಿರ್ಧರಿಸುತ್ತದೆ. ಎಲ್ಲರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು, ಬೇರೆಯವರ ಕೆಲಸವನ್ನು ಮಾಡಲು ಪ್ರಯತ್ನ ಮಾಡಬಾರದು. ಇದರಿಂದ ವ್ಯಕ್ತಿ, ಪಕ್ಷ ಹಾಗೂ ಪ್ರಾಂತಕ್ಕೆ ಅನುಕೂಲವಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಖರ್ಗೆ ಅವರು ಈಗಾಗಲೇ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಹೇಳಿದರು.
ಜಾತಿ ಗಣತಿ ಯಾವುದೇ ಒಂದು ಜಾತಿಯ ವಿರುದ್ಧ ಅಲ್ಲ. ಸಮಾಜದಲ್ಲಿ ಯಾರು ಅಸಮಾನತೆಗೆ ಒಳಗಾಗಿದ್ದಾರೆ ಎಂಬುದನ್ನು ನಿರ್ಧರಿಸಲು ಜಾತಿ ಗಣತಿ ಉಪಯುಕ್ತ. ಅಂಥವರಿಗೆ ಬಜೆಟ್ನಲ್ಲಿ ಪೂರಕವಾದ ಯೋಜನೆಗಳನ್ನು ರೂಪಿಸಲು ಜಾತಿ ಗಣತಿ ಅವಶ್ಯಕ. ಸಾಮಾಜಿಕ ನ್ಯಾಯ ಹಾಗೂ ಸಮಾನತೆಯಲ್ಲಿ ಬಿಜೆಪಿ ವಿಶ್ವಾಸವಿಟ್ಟಿಲ್ಲ. ಸಂವಿಧಾನದಿಂದ ಸಾಮಾಜಿಕ ನ್ಯಾಯವನ್ನು ಅಳಿಸಿ ಹಾಕುವುದೇ ಬಿಜೆಪಿಯ ಪ್ರಯತ್ನವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಕಾರ್ಯದರ್ಶಿ ಮಯೂರ ಜಯರಾಮ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಸಚಿವರಾದ ಎಚ್.ಕೆ. ಪಾಟೀಲ, ಸಂತೋಷ ಲಾಡ್, ಶಿವಾನಂದ ಪಾಟೀಲ, ಮಂಕಾಳ ವೈದ್ಯ, ಇತರರು ಇದ್ದರು.