ಜಿಲ್ಲೆ

ಬಿಜೆಪಿಯ 8 ಅಲ್ಲ, 28 ಶಾಸಕರು ಕಾಂಗ್ರೆಸ್​ಗೆ ಬರಬಹುದು

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬಿಜೆಪಿಯಿಂದ ಜನ ಅಷ್ಟೇ ಅಲ್ಲ, ಅವರ ಪಕ್ಷದ ಶಾಸಕರು ಬೇಸತ್ತಿದ್ದಾರೆ. 8 ಅಲ್ಲ, 28 ಬಿಜೆಪಿ ಶಾಸಕರು ಕಾಂಗ್ರೆಸ್​ಗೆ ಬರಬಹುದು. ಅದು ದೊಡ್ಡ ವಿಷಯವಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಕಾಂಗ್ರೆಸ್ ಸರ್ಕಾರವನ್ನು ಬುಡಮೇಲು ಮಾಡಲು ಹೊರಟಿದ್ದಾರೆ. ಅವರ ಜನ ವಿರೋಧಿ ನೀತಿಯಿಂದ ಅವರ ಪಕ್ಷದ ಕಾರ್ಯಕರ್ತರು-ನಾಯಕರು ಬೇಸತ್ತಿದ್ದಾರೆ. ಹಾಗಾಗಿ ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್​ನತ್ತ ಒಲವು ತೋರಿದ್ದಾರೆ. ಯಾರು ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತ, ನಾಯಕತ್ವ ಒಪ್ಪಿಕೊಂಡು ಬರುತ್ತಾರೋ ಅಂಥವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕೆಲಸ ಮುಂದೆ ಆಗುತ್ತದೆ ಎಂದರು.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂಬುದು ಬುದ್ಧಿಭ್ರಮಣೆಯಾದವರು ಹೇಳುವಂಥ ಮಾತು. ಅವರೆಲ್ಲ ತಿರುಕನ ಕನಸು ಕಾಣುತ್ತಿದ್ದಾರೆ. ಅಧಿಕಾರದಲ್ಲಿ ಇದ್ದಾಗ ದುರಾಡಳಿತ, ಅಕ್ರಮ, ಅಧಿಕಾರ ದುರುಪಯೋಗ ಮಾಡಿ ರೂಢಿ ಇರುವ ಬಿಜೆಪಿಯವರು ಹೇಗಾದರೂ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆ ರೀತಿ ಏನು ಆಗುವುದಿಲ್ಲ.. ನಾವೆಲ್ಲ ಒಗ್ಗಟ್ಟಾಗಿ ಇದ್ದೇವೆ. ಸರ್ಕಾರ ಭದ್ರವಾಗಿದೆ. ಐದು ವರ್ಷ ಪೂರ್ಣಗೊಳಿಸಿ ಮುಂದೆಯೂ ನಾವೇ ಗೆದ್ದು ಬರುತ್ತೇವೆ ಎಂದು ಹೇಳಿದರು. >