ಜಿಲ್ಲೆ

ಬಿಜೆಪಿಗೆ ಸರ್ಕಾರಗಳನ್ನು ಬೀಳಿಸುವುದು ಅಭ್ಯಾಸವಾಗಿದೆ: ಶಾಸಕ ರಮೇಶ್ ಬಂಡಿಸಿದ್ದೇಗೌಡ

ಹಾಸನ: ಬಿಜೆಪಿ-ಜೆಡಿಎಸ್‌ನವರು ಜನತಂತ್ರ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಸರ್ಕಾರವನ್ನು ಕಿತ್ತು ಹಾಕಲು ಹೊರಟಿದ್ದಾರೆ. ಬಿಜೆಪಿಯವರಿಗೆ ಸರ್ಕಾರಗಳನ್ನು ಕಿತ್ತಾಕುಗುವುದು ಅಭ್ಯಾಸ ಆಗಿದೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಮೈತ್ರಿ ಪಕ್ಷಗಳ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ರಾಜ್ಯಗಳಲ್ಲಿ ಇ.ಡಿ. ಬಳಸಿಕೊಂಡು ಹೆದರಿಸಿ ಸರ್ಕಾರ ಬೀಳಿಸಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯನ್ನು ಬಿಜೆಪಿ ಅಲುಗಾಡಿಸಲು ಹೊರಟಿದ್ದಾರೆ. ಇದಕ್ಕೆ ಜೆಡಿಎಸ್ ಸಹಕಾರ ಕೊಟ್ಟಿದೆ. ಸಿದ್ದರಾಮಯ್ಯ ಮೇಲಿನ ವೈಯುಕ್ತಿಕ ದ್ವೇಷವನ್ನು ಈ ಮಟ್ಟಕ್ಕೆ ತೆಗೆದುಕೊಂಡು ಹೋಗಬಾರದಿತ್ತು. ಸಿದ್ದರಾಮಯ್ಯ ಪ್ರಾಮಾಣಿಕವಾಗಿ ಕೆಲಸ ಮಾಡಿದವರು. ಅವರ ವಿರುದ್ಧ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಇಂತಹ ಆರೋಪಗಳಿಂದ ಹೆದರಿಕೊಳ್ಳುವ ಸ್ವಭಾವ ಸಿದ್ದರಾಮಯ್ಯದ್ದಲ್ಲ. ಅವರು ರಾಜಕಾರಣ ಮಾಡುತ್ತಿದ್ದಾರೆ. ಹಾಗಾಗಿ ನಾವು ರಾಜಕಾರಣ ಮಾಡಲೇಬೇಕಲ್ಲ ಎಂದು ಹೇಳಿದರು.
ಮುಡಾ ಹಗರಣದಲ್ಲಿ ಸತ್ತವರ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂಬ ಕೇಂದ್ರದ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರ ಯಾರ ಹೆಸರಿನಲ್ಲಿ ಡಿನೋಟಿಫಿಕೇಷನ್ ಆಗಿದೆ, ಯಾರ ಯಾರದ್ದು ಬೇನಾಮಿ ಆಸ್ತಿ ಇದೆ. ಕುಮಾರಣ್ಣ ಮತ್ತು ಅವರ ಸ್ನೇಹಿತರು ಎಷ್ಟು ಬೇನಾಮಿ ಆಸ್ತಿ ಮಾಡಿದ್ದಾರೆ ಎಂಬುದು ಗೊತ್ತಿದೆ. ನನ್ನ ಕಾರಿನಲ್ಲಿ ದಾಖಲೆಗಳಿವೆ. ಸುಮ್ಮನೆ ವೈಯುಕ್ತಿಕ ದ್ವೇಷ ಮಾಡಬಾರದು ಅಂತ ಸುಮ್ಮನಿದ್ದೇನೆ ಎಂದು ಟಾಂಗ್ ನೀಡಿದರು.
ಯಾವ ಶಾಸಕರು ಏನೇನು ಮಾಡಿದ್ದಾರೆ ಎಂಬುದನ್ನು ಇನ್ನೇರಡು ಎರಡು ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹೇಳುತ್ತೇವೆ. ಯಡಿಯೂರಪ್ಪ, ವಿಜಯೇಂದ್ರ ಅವರ ಕುಟುಂಬದ್ದು ಎಷ್ಟು ಬೇನಾಮಿ ಆಸ್ತಿಗಳಿವೆ. ಯಾರು ನಿವೇಶನಗಳನ್ನು ಪಡೆದಿದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದೇವೆ. ಇನ್ನು ಎರಡ್ಮೂರು ದಿನದಲ್ಲಿ ಆ ಎಲ್ಲ ಮಾಹಿತಿಯನ್ನು ಜನರ ಮುಂದೆ ತಂದು ಇಡುತ್ತೇವೆ. ಮುಂದೆನಾಗುತ್ತದೆಯೋ ಅದನ್ನು ಎದುರಿಸಲು ನಾನು ಸಿದ್ದನಾಗಿದ್ದೇನೆ ಎಂದು ಸವಾಲು ಹಾಕಿದರು.
ನಾನು ಕೂಡ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ. ಮೂರು ಬಾರಿ ಶಾಸಕನಾಗಿ ಮುಡಾದಲ್ಲಿ ಕೆಲಸ ಮಾಡಿದ್ದೇನೆ. ಅರ್ಜಿ ಇಲ್ಲದೆಯೇ ಹೇಗೆ ಮಂಜೂರಾತಿ ಮಾಡಲು ಆಗುತ್ತದೆ. ಅರ್ಜಿ ಇಲ್ಲ ಅಂತ ನಾವೇನು ಹೇಳಿಲ್ಲ. ಮಂಜೂರಾತಿ ಮಾಡಿಕೊಡಿ ಎಂದು ಅರ್ಜಿ ಕೊಟ್ಟಿದ್ದಾರೆ. ತಪ್ಪು ಬರೆದಾಗ ವೈಟ್ನರ್ ಹಾಕುವುದು ಸಹಜ. ನ್ಯಾಯಾಂಗ ತನಿಖೆಗೆ ಕೊಟ್ಟಿದ್ದೇವೆ ಪರಿಶೀಲನೆ ಮಾಡಲಿ. ಯಡಿಯೂರಪ್ಪ ಅವರ ತಂಗಿ ಮಕ್ಕಳಿಗೆ ನಿವೇಶನಗಳನ್ನು ಕೊಟ್ಟಿಲ್ಲವೇ? 50:50 ಸೈಟ್ ತೆಗೆದುಕೊಂಡಿಲ್ಲವೇ? ಜೆಡಿಎಸ್ ಶಾಸಕರು ತೆಗೆದುಕೊಂಡಿಲ್ಲವೇ? ತಮ್ಮ, ಅಕ್ಕನ ಮಕ್ಕಳು, ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳಿಗೆ ಕೊಡಿಸಿಲ್ಲವೇ? ಪ್ರಾಮಾಣಿಕರಾಗಿದ್ದರೆ ಅವರು ಹೇಳಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಅವರು ಇಲ್ಲಿ ನೇರ ಅರ್ಜಿದಾರರಲ್ಲ. ಸಿದ್ದರಾಮಯ್ಯ ಅವರ ಒಂದೇ ಒಂದು ಸಹಿ ಇಲ್ಲ. ಅಧಿಕಾರಿಗಳು 50:50 ನಿವೇಶನಗಳನ್ನು ಕೊಡುವುದನ್ನು ಯಾವುದೇ ಕಾರಣಕ್ಕೂ ಸಭೆಗೆ ಮಂಡಿಸಲ್ಲ. ಇದಕ್ಕೆ ಅಧಿಕಾರಿಗಳು ಕಾರಣವೇ ಹೊರತು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಮಿತಿ ಕಾರಣ ಅಲ್ಲ. ಯಾರ ಗಮನಕ್ಕೂ ತಾರದೇ ಅಧಿಕಾರಿಗಳೇ ಮಾಡಿರುವುದು. ಮುಡಾ ಅಧ್ಯಕ್ಷರು, ಯಾವ ಸದಸ್ಯರ ಗಮನಕ್ಕೂ ಬರಲ್ಲ. ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಸವಲತ್ತು ಪಡೆದಿರುವ ಎಲ್ಲರ ಹೆಸರು ಹೇಳಲಿ. ತನಿಖೆ ನಡೆಯುತ್ತಿದೆ ಎಲ್ಲ ಸತ್ಯಾಂಶ ಹೊರಬರಲಿದೆ ಎಂದರು.
ದೆಹಲಿಗೆ ಸಿಎಂ, ಡಿಸಿಎಂ ಭೇಟಿ ವಿಚಾರವಾಗಿ ಮಾತನಾಡಿ, ಎಲ್ಲ ಶಾಸಕರು ದೆಹಲಿಗೆ ಹೋಗಿಲ್ಲ. ರಾಜ್ಯದ ಇವತ್ತಿನ ಪರಿಸ್ಥಿತಿ ಬಗ್ಗೆ ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಹಿತಿ ನೀಡಲು ಹೋಗಿದ್ದಾರೆ. ರಾಷ್ಟ್ರಪತಿಯನ್ನು ಭೇಟಿ ಮಾಡಲು ಎಲ್ಲ ಶಾಸಕರು ಒತ್ತಾಯ ಮಾಡುತ್ತಿದ್ದೇವೆ. ಬಿಜೆಪಿ-ಜೆಡಿಎಸ್‌ನವರು ಗದಾಪ್ರಹಾರ ಮಾಡುತ್ತಿದ್ದಾರೆ. ಅದನ್ನು ರಾಷ್ಟ್ರಪತಿಗೆ ಮನದಟ್ಟು ಮಾಡಿಕೊಡೋಣ ಎಂದು ಹೇಳಿದ್ದೇವೆ. ಆದಷ್ಟು ಬೇಗ ಎಲ್ಲ ಶಾಸಕರು ರಾಷ್ಟ್ರಪತಿಯನ್ನು ಭೇಟಿ ಮಾಡುತ್ತೇವೆ ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ:
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿದ ರಮೇಶ್ ಬಂಡಿಸಿದ್ದೇಗೌಡ, ಕೆಪಿಸಿಸಿ ಅಧ್ಯಕ್ಷರು ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದಾರೆ. ಡಿಸಿಎಂ ಜತೆಗೆ ಜಲ ಸಂಪನ್ಮೂಲ ಇಲಾಖೆ ಜವಾಬ್ದಾರಿ ಹೊಂದಿದ್ದು ಅಧ್ಯಕ್ಷ ಸ್ಥಾನವನ್ನು ತಾವೇ ಬಿಟ್ಟು ಕೊಡುತ್ತೇನೆ. ಈ ಸ್ಥಾನಕ್ಕೆ ಬೇರೆ ಯಾರನ್ನಾದರೂ ನೇಮಿಸಿ ಎಂದು ಡಿಕೆ ಶಿವಕುಮಾರ್ ಅವರೇ ನೇರವಾಗಿ ಹೈಕಮಾಂಡ್‌ಗೆ ಹೇಳಿದ್ದಾರೆ. ಯಾರು ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುತ್ತಾರೋ ಅವರನ್ನು ಹೈಕಮಾಂಡ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಿದೆ ಎಂದು ತಿಳಿಸಿದರು.