ಬೀದರ್: ಬಿಜೆಪಿ ಇಂದು ದೇಶವ್ಯಾಪಿ ಬಲಿಷ್ಠಗೊಳ್ಳಲು ಯುವ ಸಮೂಹದ ಭರಪೂರ ಬೆಂಬಲವೇ ಪ್ರಮುಖ ಕಾರಣವಾಗಿದೆ. ಯುವ ಶಕ್ತಿ ಪಕ್ಷಕ್ಕೆ ಬೆನ್ನೆಲುಬಾಗಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ ಪಾಟೀಲ್ ಗಾದಗಿ ಹೇಳಿದರು.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಯುವ ಮೋರ್ಚಾ ಬೀದರ್ ಗ್ರಾಮೀಣ ಮತ್ತು ನಗರ ಮಂಡಲ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯತೆ ವಿಚಾರಧಾರೆಯಲ್ಲಿ ಸದೃಢ ಭಾರತ ನಿರ್ಮಾಣದ ಏಕೈಕ ಧ್ಯೇಯದೊಂದಿಗೆ ಪಕ್ಷ ಕೆಲಸ ಮಾಡುತ್ತಿದೆ. ಪಕ್ಷದ ತತ್ವ, ಸಿದ್ಧಾಂತಕ್ಕೆ ಮನ್ನಿಸಿ ಕೋಟ್ಯಂತರ ಯುವಕರು ಬೆಂಬಲಕ್ಕೆ ನಿಂತಿದ್ದಾರೆ. ಯುವ ಮೋರ್ಚಾ ಪದಾಧಿಕಾರಿಗಳು ಸರ್ಕಾರದ ಸಾಧನೆ ಹಾಗೂ ಪಕ್ಷದ ವಿಚಾರಗಳನ್ನು ಜನರಿಗೆ ಮುಟ್ಟಿಸಿ ಇನ್ನಷ್ಟು ಯುವಕರನ್ನು ಪಕ್ಷಕ್ಕೆ ಸೇರಿಸಿ ಸಂಘಟನೆ ಬಲಪಡಿಸಬೇಕೆಂದು ಸಲಹೆ ನೀಡಿದರು.
ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಶೇಖಾಪುರ ಮಾತನಾಡಿ, 18ರಂದು ಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಅಂದು ಚೆನ್ನಮ್ಮ ವೃತ್ತ(ಮೈಲೂರ ಕ್ರಾಸ್) ಹತ್ತಿರದ ಕಾಜಿ ಫಂಕ್ಶನ್ ಹಾಲ್ ನಲ್ಲಿ ಜಿಲ್ಲಾ ಪದಾಧಿಕಾರಿಗಳ ಸಭೆ ನಡೆಯಲಿದೆ. ರಾಜ್ಯಾಧ್ಯಕ್ಷರ ಮೊದಲ ಜಿಲ್ಲಾ ಭೇಟಿ ಯಶಸ್ವಿ ಸಂಬಂಧ ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಸೇರಿಸಲು ಆದ್ಯತೆ ನೀಡಲಾಗಿದೆ. ಬರುವ ದಿನಗಳಲ್ಲಿ ಈ ಸಂಬಂಧ ಅಭಿಯಾನ ನಡೆಸುವುದಾಗಿ ಹೇಳಿದರು.
ಪ್ರಮುಖರಾದ ಕಿರಣ್ ಪಾಲಂ, ಅಂಬರೀಶ ಬಟ್ನಾಪುರೆ, ಸಂತೋಷ ಕಾಳೆ, ಜನಾರ್ಧನ್ ರೆಡ್ಡಿ ಆಣದೂರ, ಸಚಿನ್, ಅಮರ್ ಬಡದಾಳೆ ಇತರರಿದ್ದರು.
ಕೇಂದ್ರ ಸರ್ಕಾರದ ಸಾಧನೆ ಅಪಾರ. ಜಾಗತಿಕ ಮಟ್ಟದಲ್ಲಿ ಭಾರತದ ಘನತೆ, ಗೌರವ ಹೆಚ್ಚಿಸಿದ ಮೊದಲ ಪ್ರಧಾನಿ ಮೋದಿ ಎಂಬುದು ಹೆಮ್ಮೆ ಸಂಗತಿ. ರಾಜ್ಯದಲ್ಲೂ ಯಡಿಯೂರಪ್ಪ ಸರ್ಕಾರ ಕರೊನಾ ಕಷ್ಟದ ನಡುವೆಯೂ ಮಾದರಿ ಕೆಲಸ ಮಾಡುತ್ತಿದೆ.| ವಿಜಯಕುಮಾರ ಪಾಟೀಲ್ ಗಾದಗಿಬಿಜೆಪಿ ಜಿಲ್ಲಾ ಕಾರ್ಯದರ್ಶಿ